"ಅನಾಪಾನಸತಿ ಧ್ಯಾನ" ಧ್ಯಾನ ಶಿಬಿರ

Anapanasati Dhyana Meditation Camp
Published on

ಮಡಿಕೇರಿ:

ಧ್ಯಾನ ಮನುಷ್ಯನ ಮಾನಸಿಕ ವಿಕಸನ ಮತ್ತು ಜ್ಞಾನವೃದ್ಧಿಗೆ ಸಹಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.
ರಾಮನಗರ ಪಿರಮಿಡ್ ಧ್ಯಾನ ಮಂದಿರ ಹಾಗೂ ವಿವಿಧ ಜಿಲ್ಲೆಗಳ ಪಿರಮಿಡ್ ಕೇಂದ್ರಗಳ ಪಿರಮಿಡ್ ಮಾಸ್ಟರ್ಸ್‌ಗಳಿಂದ ಮಡಿಕೇರಿಯ ಓಂಕಾರ ಸದನದಲ್ಲಿ ಸೋಮವಾರ ನಡೆದ "ಅನಾಪಾನಸತಿ ಧ್ಯಾನ" ಉಚಿತ ಧ್ಯಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಧ್ಯಾನದಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ, ಈ ರೀತಿಯ ಧ್ಯಾನ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾನಸಿಕವಾಗಿ ವಿಕಸನ ಹೊಂದಬೇಕು ಎಂದು ಧ್ಯಾನ ಪ್ರಕಾರಗಳ ಕುರಿತು ವಿವರಿಸಿದರು.

ಶಿಬಿರದ ಸಂಯೋಜಕ, ಅರಣ್ಯ ಇಲಾಖೆಯ ನಿವೃತ್ತ ಉದ್ಯೋಗಿ ಹೆಚ್.ಎಂ.ಕೃಷ್ಣ ಮಾತನಾಡಿ, ನಗರದ ಪ್ರತಿಯೊಬ್ಬರು ಧ್ಯಾನದಿಂದ ಪ್ರಯೋಜನ ಪಡೆಯಲಿ ಎಂದು ಈ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ "ಅನಾಪಾನಸತಿ ಧ್ಯಾನದ ಸತ್ಯತೆಯನ್ನು ಪಿಎಂಸಿ ವಾಹಿನಿಯಿಂದ ದೃಢಪಡಿಸಿಕೊಂಡು ನಗರದ ಮನೆ ಮನೆಗಳಿಗೆ ತೆರಳಿ ಧ್ಯಾನದಿಂದ ದೊರೆಯುವ ಲಾಭದ ಬಗ್ಗೆ ನಿವಾಸಿಗಳಿಗೆ ಮನದಟ್ಟು ಮಾಡಿಕೊಡಲಾಗಿದೆ. ಜನಸಾಮಾನ್ಯರಿಗೆ ಧ್ಯಾನದ ಮಹತ್ವದ ಬಗ್ಗೆ ಮನದಟ್ಟು ಮಾಡಿಕೊಡಲೇಬೇಕೆನ್ನುವ ಉದ್ದೇಶದಿಂದ ಜನಹಿತಕ್ಕಾಗಿ ಶಿಬಿರ ನಡೆಸಲಾಗಿದೆ. ಪಿರಮಿಡ್ ಮಾಸ್ಟರ್ಸ್ ಹಾಗೂ ಪ್ರಮುಖರಿಂದ ಉಪಯುಕ್ತ ಮಾಹಿತಿಯನ್ನು ಹಂಚುವ ಪ್ರಯತ್ನ ಮಾಡಲಾಗಿದೆ ಎಂದರು.

ರಾಮನಗರದ ಪಿರಮಿಡ್ ಕೇಂದ್ರದ ಸ್ಥಾಪಕ ಕೃಷ್ಣಪ್ಪ ಮಾತನಾಡಿ, ಮಡಿಕೇರಿಯಲ್ಲಿ ಪಿರಮಿಡ್ ಕೇಂದ್ರವನ್ನು ಸ್ಥಾಪಿಸಲು ನಾಗರಿಕರು ಸಹಕಾರ ನೀಡಬೇಕೆಂದು ಕೋರಿದರು.
ಶಿಬಿರದ ಮಾಸ್ಟರ್ ದಿವ್ಯಶ್ರೀ ಮಾತನಾಡಿ, ಮನಸ್ಸಿನ ಏಕಾಗ್ರತೆಯಿಂದ ಧ್ಯಾನವನ್ನು ಸಾಧಿಸಬಹುದು. ಇದು ಕ್ರಮೇಣವಾಗಿ ಮಾನಸಿಕ ಸ್ಥಿತಿಗತಿಯನ್ನು ಒಂದೇ ಕಡೆಗೆ ರೂಪಿಸಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒಂದು ವಿಷಯದ ಕಡೆಗೆ ಹೆಚ್ಚು ಗಮನ ಕೊಡುವ ಹಾಗೆ ನಿರ್ವಹಣೆ ಮಾಡುತ್ತದೆ. ಅಲ್ಲದೆ ಆಂತರಿಕ ಶಕ್ತಿಯನ್ನು ಹೆಚ್ಚಿಸುತ್ತದೆ, ಧ್ಯಾನದಿಂದ ಸಹಾನುಭೂತಿ, ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳು ವಿಕಾಸವಾಗುತ್ತವೆ ಎಂದರು.

ಧ್ಯಾನದಿಂದ ತಮ್ಮಲ್ಲಿ ಆದ ಪರಿವರ್ತನೆಗಳು ಮತ್ತು ಸಮಸ್ಯೆಗಳಿಗೆ ದೊರೆತ ಪರಿಹಾರದ ಬಗ್ಗೆ ವಿವರಿಸಿದರು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿರು.
ಬೆಂಗಳೂರಿನ ಬ್ರಹ್ಮಶ್ರೀ ಪ್ರೇಮಾನಾಥ ಗುಪ್ತ, ಸುರೇಶ್ ಕಲ್ಬುರ್ಗಿ, ಸಂಗೀತ ವಿದ್ವಾನ್ ಗಣೇಶ್ ಕುಮಾರ್ ಇದ್ದರು.
ಇದೇ ಸಂದರ್ಭ ಕಲಾವಿದ ಗಣೇಶ್ ಕುಮಾರ್ ಹಾಗೂ ಸಂಗಡಿಗರಿಂದ ಇಂಪಾದ ಸಂಗೀತಗೋಷ್ಠಿ ಆಯೋಜಿಸಲಾಗಿತ್ತು. ಧ್ಯಾನ ಶಿಬಿರ ಆಯೋಜಿಸಲು ಶ್ರಮಿಸಿದ ಹೆಚ್.ಎಂ.ಕೃಷ್ಣ ಹಾಗೂ ಕುಟುಂಬವನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net