ಸಾಂಸ್ಕೃತಿಕ ನಗರಿಯಲ್ಲಿ ‘ಅನಂತಾಶ್ವಥ’

20
Published on

ಸಂಚಲನ ಮೈಸೂರು ಸಂಸ್ಥೆ ವತಿಯಿಂದ ಸೋಮವಾರ ಕಿರುರಂಗಮಂದಿರದಲ್ಲಿ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ಸ್ಮರಣಾರ್ಥ ‘ಅನಂತಾಶ್ವಥ’ ಭಾವಗೀತೆಗಳ ಕಾರ್ಯಕ್ರಮ ನಡೆಯಿತು.

ಸಂಸ್ಥೆ ವತಿಯಿಂದ ಆಯೋಜಿಸಿದ್ದ 5 ದಿನಗಳ ಕಾಲ ಸುಗಮ ಸಂಗೀತ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಕಲಿಕಾರ್ಥಿಗಳು ಈ ಮೂವರು ದಿಗ್ಗಜರ ಸ್ವರ ಸಂಯೋಜನೆಯ ಅಪರೂಪದ ಗೀತೆಗಳ ಗಾಯನ ನಡೆಸಿಕೊಟ್ಟರು.

ಹಿನ್ನೆಲೆ ಗಾಯಕ ರವಿ ಮೂರೂರು ಮಾರ್ಗದರ್ಶನದಲ್ಲಿ ಕೆ.ಎಸ್.ನಿಸಾರ್ ಅಹಮದ್ ರಚನೆಯ, ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ ‘ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ’ ಗೀತೆಯೊಂದಿಗೆ ಗಾಯನ ಆರಂಭವಾಯಿತು. ಬಳಿಕ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ರಚನೆಯ, ಸಿ.ಅಶ್ವಥ್ ಸಂಗೀತ ಸಂಯೋಜನೆಯ ‘ಸರಿದೀತೆ ಕಾರಿರುಳು’, ಕೆ.ಎಸ್.ನರಸಿಂಹಸ್ವಾಮಿ ರಚನೆಯ, ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ ‘ದೇವ ನಿನ್ನ ಮಾಯೆಗಂಜಿ’ ಸೇರಿದಂತೆ ಐದು ಗೀತೆಯನ್ನು ಪ್ರಸ್ತುತ ಪಡಿಸಿದರು.

ಈ ದಿಗ್ಗಜರ ಸ್ವರ ಸಂಯೋಜನೆಯ ಭಾವಗೀತೆಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಕಲಿಕಾರ್ಥಿಗಳು ಕ್ರಿಯಾಶೀಲತೆಯೊಂದಿಗೆ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು.

ಬಳಿಕ ಗಾಯಕ ರವಿ ಮೂರೂರು ‘ಬನ್ನಿ ಹರಸಿರಿ ತಂದೆಯೇ’, ‘ಮುಚ್ಚುಮರೆ ಇಲ್ಲದೆಯೇ’, ‘ನಿನ್ನೊಲುಮೆಯಿಂದಲೇ’, ‘ಕಾಣದ ಕಡಲಿಗೆ’, ‘ನನ್ನೆಂಡ್ತಿ ನುಗ್ಗಿದ್ಲು’, ‘ಎದೆ ತುಂಬಿ ಹಾಡುವೆನು’ ಸೇರಿದಂತೆ ಹತ್ತಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಸಂಗೀತಾಸ್ತಕರನ್ನು ರಂಜಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಜತೆಗೆ ಸುಗಮ ಸಂಗೀತ ಕಾರ್ಯಕ್ರಮ ನಡೆಯುವುದು ಕಡಿಮೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸುಗಮ ಸಂಗೀತ ತರಬೇತಿ ಶಿಬಿರ ಆಯೋಜಿಸಿದ್ದು ಹಾಗೂ ಕಲಿಕಾರ್ಥಿಗಳಿಂದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಗಾಯಕಿ ಶುಭಾ ರಾಘವೇಂದ್ರ, ಕವಿ ಡಾ.ಜಯಪ್ಪ ಹೊನ್ನಾಳಿ, ಗಾಯಕ ರವಿ ಮೂರೂರು, ರಂಗ ನಿರ್ದೇಶಕ ದೀಪಕ್ ಮೈಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net