ಅನಂತಕುಮಾರ್ ಪದಚ್ಯುತಿಗೆ ಭುಗಿಲೆದ್ದ ಆಕ್ರೋಶ

ANANTHAKUMAR
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನಲ್ಲಿ ಎರಡು ದಶಕದಿಂದ ರಾಜಕೀಯ ಅಸ್ತಿತ್ವಕ್ಕಾಗಿ ಪರಿತಪಿಸುತ್ತಿರುವ ಕಾಂಗ್ರೆಸ್ ಪದಚ್ಯುತಿ ಪರ್ವದ ಮೂಲಕ ಇದ್ದವರು ದೂರ ಸರಿಯುವಂತೆ ಮಾಡಿಕೊಳ್ಳುತ್ತಿದೆ. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವೀರಶೈವ- ಲಿಂಗಾಯಿತ ಸಮುದಾಯಕ್ಕೆ ಸೇರಿದ ಅನಂತಕುಮಾರ್ ಅವರನ್ನು ದಿಢೀರ್ ಪದಚ್ಯುತಿಗೊಳಿಸಿರುವುದು ಆಕ್ರೋಶ ಸ್ಫೋಟಗೊಳ್ಳುವಂತೆ ಮಾಡಿದೆ.

ಮೂರು ವರ್ಷ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡ ಮುಕ್ಕಾಟೀರ ಶಿವು ಮಾದಪ್ಪ ಕಳೆದ ವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ದ್ದಾರೆ. ಈ ಸ್ಥಾನಕ್ಕೆ ನೇಮಕಗೊಂಡಿದ್ದ ಕೆ.ಕೆ. ಮಂಜುನಾಥ್‌ಕುಮಾರ್ ಅವರಿಂದ ಕೂಡ ಬಲವಂತವಾಗಿ ರಾಜೀನಾಮೆ ಪತ್ರ ಪಡೆದುಕೊಳ್ಳ ಲಾಗಿತ್ತು. ಇದೀಗ ಅನಂತಕುಮಾರ್ ಅವರನ್ನು ಪದಚ್ಯುತಗೊಳಿಸಿರುವುದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿ ಕಾಡಲಾರಂಭಿಸಿದೆ.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವಿ.ಪಿ. ಶಶಿಧರ್ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಶನಿವಾರಸಂತೆಯ ಅನಂತಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ವೀರಶೈವ- ಲಿಂಗಾಯಿತ ಸಮುದಾಯಕ್ಕೆ ಸೇರಿದ ಸಂಘಟನಾ ಚತುರ ಅನಂತಕುಮಾರ್ ಅವರನ್ನು ನೇಮಕ ಮಾಡಲಾಗಿತ್ತು. ಕಳೆದ ಎರಡು ವರ್ಷ ಒಂಭತ್ತು ತಿಂಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇದೀಗ ಏಕಾಏಕೀ ಪದಚ್ಯುತಗೊಳಿಸಿ, ಆ ಸ್ಥಾನಕ್ಕೆ ವಿ.ಪಿ. ಶಶಿಧರ್ ನೇಮಕ ಮಾಡಲಾಗಿದೆ. ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಖಾಲಿ ಮಾಡಿಸುವ ವೇಳೆ ಕನಿಷ್ಠ ಅನಂತಕುಮಾರ್‌ಗೆ ಯಾವ ಮಾಹಿತಿಯೂ ನೀಡಲಿಲ್ಲಿ. ಕಾಂಗ್ರೆಸ್ಸಿನ ಬಹುತೇಕ ಮುಖಂಡರಿಗೂ ಈ ಬಗ್ಗೆ ಅರಿವು ಇರಲಿಲ್ಲ. ಗೌಪ್ಯವಾಗಿ ಬ್ಲಾಕ್ ಅಧ್ಯಕ್ಷರ ಬದಲಾವಣೆ ಮತ್ತು ನೇಮಕಾತಿ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿರುವ ಡಾ.ಮಂಥರ್ ಗೌಡ ತನ್ನ ಬದಲಾವಣೆಗೆ ಕಾರಣಕರ್ತರಾಗಿದ್ದಾರೆಂದು ಅನಂತಕುಮಾರ್ ವಿಜಯವಾಣಿಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚಂದ್ರಕಲಾ ಕೇವಲ ತನ್ನ ಸ್ವಾರ್ಥ ಯೋಚನೆ ಮಾಡುತ್ತಾರೆ. ಹಾಸನ ಜಿಲ್ಲೆಯಿಂದ ಬಂದಿರುವ ಡಾ.ಮಂಥರ್ ಗೌಡ ಅವರನ್ನು ಕೊಡಗಿನ ರಾಜಕೀಯದಿಂದ ದೂರ ಮಾಡಲು ಗೋ ಬ್ಲಾಕ್ ಮಂಥರ್ ಗೌಡ ಅಭಿಮಾನ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

ವೀರಶೈವ- ಲಿಂಗಾಯಿತರಿಗೆ ಅನ್ಯಾಯ ಮಾಡಲಾಗಿದೆ. ಸಾಮಾಜಿಕ ನ್ಯಾಯದಡಿ ನನಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಇದೀಗ ನನ್ನನ್ನು ಪದಚ್ಯುತಗೊಳಿಸುವುದರ ಮೂಲಕ ಕಾಂಗ್ರೆಸ್ ನಾಯಕರು ವೀರಶೈವ- ಲಿಂಗಾಯಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

ವಿ.ಪಿ. ಶಶಿಧರ್ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ೩ ವರ್ಷದ ಹಿಂದೆ ರಾಜೀನಾಮೆ ನೀಡಿದ್ದರು. ಕಳೆದ ೩ ವರ್ಷದಿಂದ ಪಕ್ಷ ಕ್ಕಾಗಿ ಯಾವ ಕೆಲಸವನ್ನೂ ಮಾಡದ ಅವರನ್ನು ಮರಳಿ ಅದೇ ಸ್ಥಾನಕ್ಕೆ ತಂದಿರುವ ನಾಯಕರ ಉದ್ದೇಶ ಏನೆಂದು ಅನಂತಕುಮಾರ್ ಪ್ರಶ್ನಿಸಿ ದ್ದಾರೆ. ಕುಶಾಲನಗರ ಬ್ಲಾಕ್ ಅಧ್ಯಕ್ಷರ ಬದಲಾವಣೆಯಿಂದ ಭುಗಿಲೆದ್ದಿರುವ ಅಸಮಾಧಾನ ಯಾವ ಹಂತಕ್ಕೆ ತಲುಪಲಿದೆ ಎಂಬ ಸಹಜ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

**
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವ ಮುನ್ನ ನನ್ನೊಂದಿಗೆ ಯಾರೂ ಮಾತನಾಡಿಲ್ಲ. ೨ ವರ್ಷ ೯ ತಿಂಗಳು ಪಕ್ಷ ಸಂಘಟನೆಗಾಗಿ ದುಡಿದಿದ್ದು, ಇದರ ಫಲಿತಾಂಶ ಮುಂದಿನ ಎಂಎಲ್‌ಎ ಚುನಾವಣೆ ವೇಳೆ ಸಿಕ್ಕುತ್ತಿತ್ತು. ಆದರೆ, ಏಕಾಏಕೀ ಬದಲಾವಣೆ ಮಾಡುವುದರ ಮೂಲಕ ನಾಯಕರು ವೀರಶೈವ- ಲಿಂಗಾಯಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಅನಂತಕುಮಾರ್, ಪದಚ್ಯುತ ಅಧ್ಯಕ್ಷರು, ಕುಶಾಲನಗರ ಬ್ಲಾಕ್ ಕಾಂಗ್ರೆಸ್.

**
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅನಂತಕುಮಾರ್ ತಮ್ಮ ವ್ಯಾಪ್ತಿಯಲ್ಲಿ ಉತ್ತಮ ರೀತಿ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ. ಏಕಾಏಕೀ ಬದಲಾವಣೆಯಿಂದ ಸಹಜವಾಗಿ ಅಸಮಾಧಾನಗೊಂಡಿದ್ದಾರೆ. ಪ್ರಸ್ತುತ ನಡೆದಿರುವ ವಿದ್ಯಮಾನಗಳ ಕುರಿತು ಪಕ್ಷದ ವರಿಷ್ಠ ರೊಂದಿಗೆ ಚರ್ಚಿಸಲಾಗುವುದು. ಕೆ.ಕೆ. ಮಂಜುನಾಥ್‌ಕುಮಾರ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರು.

**
ಆಡಳಿತಾರೂಢ ಪಕ್ಷ ಹಾಗೂ ಜನಪ್ರತಿನಿಧಿಗಳ ವೈಫಲ್ಯದ ಕುರಿತು ಕೊಡಗಿನಲ್ಲಿ ಗಟ್ಟಿಯಾಗಿ ಮಾತನಾಡುತ್ತಿರುವ ಏಕೈಕ ನಾಯಕ ವಿ.ಪಿ. ಶಶಿಧರ್. ಅವರನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವರಿಷ್ಠರು ನೇಮಕ ಮಾಡಿದ್ದಾರೆ. ಪಕ್ಷ ಸಂಘಟನೆಗಾಗಿ ಇದು ಒಳ್ಳೆಯ ನಿರ್ಧಾರ. ಬದಲಾವಣೆ ಆಗಿರುವ ಅಧ್ಯಕ್ಷರು ಬೇರೆ ಸ್ಥಳದಲ್ಲಿ ಇರಬೇಕಾಗಿತ್ತು ಎಂಬುದನ್ನು ಮರೆಯಬಾರದು. ಕೆ.ಪಿ. ಚಂದ್ರಕಲಾ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.

**
ಅನಂತಕುಮಾರ್ ಒಳ್ಳೆಯ ಸಂಘಟಕರಾಗಿದ್ದಾರೆ. ಸ್ಥಾನ ಬದಲಾವಣೆಯಿಂದ ಸಹಜವಾಗಿ ಅಸಮಾಧಾನಗೊಂಡಿದ್ದು, ಮಾತುಕತೆ ಮೂಲಕ ಬೇಸರ ಶಮನ ಮಾಡಲಾಗುವುದು. ವಿವಿಧ ಕಾರಣದಿಂದ ಹಲವು ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದನ್ನು ಭಿನ್ನಮತ, ಗುಂಪುಗಾರಿಕೆ ಅನ್ನುವುದಕ್ಕಿಂತ ಪಕ್ಷದ ಹಿತಾಸಕ್ತಿಗಾಗಿ ತೆಗೆದುಕೊಂಡ ನಿರ್ಧಾರ ಎಂದು ಪರಿಗಣಿಸಬೇಕು. ಎಚ್.ಎಸ್. ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net