

ಮಂಡ್ಯ: ಸಾಧಕರ ಸಾಧನೆಗಳು ಸಮಾಜಕ್ಕೆ ದಿಕ್ಕು ತೋರಿಸುವ ಬೆಳಕಾಗಿವೆ. ಸಾಧನೆ ಯಾರೊಬ್ಬರ ಸ್ವತ್ತಲ್ಲ, ಬದಲಿಗೆ ಸಾಧಕರ ಸ್ವತ್ತು. ಅಂತಹ ಸಾಧಕರ ಸಾಧನೆಗಳಿಗೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ರಮಣಶ್ರೀ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಲೇಖಕ ಎಸ್.ಷಡಕ್ಷರಿ ಹೇಳಿದರು.
ಇಲ್ಲಿನ ಶಂಕರನಗರದಲ್ಲಿನ ಅಭಿನವ ಭಾರತಿ ಕಾಲೇಜಿನ ಸಭಾಂಗಣದಲ್ಲಿ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಅನಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ಯುವಜನರು ಸಾಧಕರ ಸಾಧನೆಯನ್ನು ಅರಿಯಬೇಕು. ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳು, ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರಿಗೆ ಸಂಬಳದಿಂದ ಸಂತೋಷ ಇರುವುದಿಲ್ಲ. ಆದರೆ, ಆತ್ಮಸಂತೋಷ ಸಿಗುವುದು ಆ ವೃತ್ತಿಯಿಂದ ಮಾತ್ರ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಗೆ ಶಿಕ್ಷಕರ ಮೇಲಿರುತ್ತದೆ. ಹೀಗಾಗಿ ಶಿಕ್ಷಕರು ತಮ್ಮ ವೃತ್ತಿಗೆ ಹೆಚ್ಚು ಗೌರವ ಕೊಟ್ಟು ಮಕ್ಕಳನ್ನು ದೇಶದ ಒಳ್ಳೆಯ ಪ್ರಜೆಗಳಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಲೇಖಕ ವಿದ್ವಾನ್ ಜಗದೀಶ್ ಶರ್ಮಾ ಮಾತನಾಡಿ, ಕೆಲವರು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ, ಕೆಲವರನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬರುತ್ತವೆ. ಅದಕ್ಕಾಗಿ ಸಾಧನೆ ಮಾಡಬೇಕು. ನಾವು ಮಾಡುವ ಕೆಲಸಗಳು ಒಳ್ಳೆಯದಾಗಿದ್ದರೆ, ಸಮಾಜಕ್ಕೆ ಕೊಡುಗೆಗಳನ್ನು ನೀಡಿದರೆ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ. ಅಂತಹವರನ್ನು ಸಮಾಜವೇ ಗೌರವಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್‌ನ ಅಧ್ಯಕ್ಷ ಶಿವಮೂರ್ತಿ ಕೀಲಾರ ಮಾತನಾಡಿ, ಅನಂತಕುಮಾರ ಸ್ವಾಮೀಜಿ ಅವರ ಸಾಮಾಜಿಕ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರತಿ ವರ್ಷವು ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಯನ್ನು ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಸಮಾಜಸೇವಾ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಡಾ.ಹಾಸನ ರಘು ಹಾಗೂ ಆರೋಗ್ಯ ಕ್ಷೇತ್ರದ ಪ್ರಶಸ್ತಿಯನ್ನು ವೈದ್ಯ ಡಾ.ಬಿ.ಎಸ್.ಕಕ್ಕಿಲ್ಲಾಯ ಅವರಿಗೆ ಪ್ರದಾನ ಮಾಡಲಾಯಿತು.