

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿಯ ಭಾಗದ ಜನರ ಅಭಿಮಾನ, ಪ್ರೀತಿ ಧನ್ಯತಾ ಭಾವ ಮೂಡಿಸಿದೆ. ಮಂಗಳಾ ದೇವಿಯ ಕೃಪೆಯಿಂದ ಇದು ಸಾಧ್ಯ ವಾಗಿದೆ. ಎಳೆಯ ಪ್ರಾಯದಲ್ಲಿ ನಾನು ಓಡಾಡಿದ ಜಾಗದಲ್ಲಿ ಪಡೆಯುತ್ತಿರುವ ಈ ಹೃದಯಸ್ಪರ್ಶಿ ಸನ್ಮಾನ ಸದಾ ನೆನಪಿನಲ್ಲಿ ಉಳಿಯುತ್ತದೆ. ಮನಸ್ಸು ತುಂಬಿ ಬಂದಿದೆ ಎಂದು ನಟ ಅನಂತನಾಗ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಅನಂತನಾಗ್-75 ಅಭಿನಂದನಾ ಸಮಿತಿ ಹಾಗೂ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಅನಂತ ಅಭಿನಂದನೆ’ (ನಟ ಅನಂತನಾಗ್ ಅವರ ವೃತ್ತಿ ಜೀವನದ 50ರ ಸಂಭ್ರಮ ಹಾಗೂ 75ನೇ ಹುಟ್ಟುಹಬ್ಬ) ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಸರಗೋಡಿನ ಆನಂದಾಶ್ರಮದಲ್ಲಿ ಜೀವನದ 6 ವರ್ಷಗಳನ್ನು ಕಳೆದ ಸಂದರ್ಭ ‘ಗುರುಗಳೇ ಸಾಕ್ಷಾತ್ ದೇವರು’ ಎನ್ನುವುದನ್ನು ಅರ್ಥಮಾಡಿಕೊಂಡೆ. ರಾಜಕಾರಣಿಗಳ ಜೀವನ ಎಷ್ಟು ಕಷ್ಟ ಎನ್ನುವುದನ್ನು ವಿಧಾನ ಪರಿಷತ್ ಸದಸ್ಯನಾಗಿದ್ದಾಗ ತಿಳಿದುಕೊಂಡೆ. ರಾಜಕೀಯದಲ್ಲಿ ನನ್ನದು ಸಣ್ಣ ಪಾತ್ರ. ಮುಗಿದ ಕೂಡಲೇ ಹೊರಬಂದಿದ್ದೇನೆ ಎಂದು ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಮೆಲುಕು ಹಾಕಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ದೇಶ ಕಂಡ ಸಹಜ ಅಭಿನಯದ ಅದ್ಭುತ ಪ್ರತಿಭೆಯ ಅನಂತ್‌ನಾಗ್ ಅವರಂತವರು ಕಾಲ ನಿರ್ಣಾಯಕರು. ಪಂಪನ ಕಾಲದವರು, ರನ್ನನ ಕಾಲದವರು ಎಂದು ಹೇಳುವಂತೆ, ನಾವು ಅನಂತನಾಗ್ ಕಾಲದವರು ಎಂದು ಹೇಳುವುದು ನಮಗೆ ಹೆಮ್ಮೆ ಎಂದು ಅಭಿಮಾನ ವ್ಯಕ್ತಪಡಿಸಿದರು. ನಮಗೆ ಅನಂತನಾಗ್ ಕರ್ನಾಟಕದ ಅಮಿತಾಭ್ ಬಚ್ಚನ್. ಅವರ ಸಹಜ ಅಭಿನಯದ ಚಿತ್ರಗಳನ್ನು ನೋಡುತ್ತಾ ಬೆಳೆದವರು ನಾವು. ಅವರನ್ನು ಮಂಗಳೂರಿನಲ್ಲಿ ಅತ್ಯುತ್ತಮ ರೀತಿ ಅಭಿನಂದಿಸುವ ಮೂಲಕ ಕಾರ್ಯಕ್ರಮದ ಸಂಘಟಕರು ಕೂಡ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇದೊಂದು ಸಾಂಸ್ಕೃತಿಕ ವರ್ಗಾವಣೆ ಎಂದರು.
ಪತ್ನಿ ಗಾಯತ್ರಿ ಅನಂತನಾಗ್, ಪುತ್ರಿ ಅದಿತಿ, ಅಳಿಯ ವಿವೇಕ್, ಶಾಸಕ ವೇದವ್ಯಾಸ ಕಾಮತ್, ನಟ ಡಾ.ದೇವದಾಸ ಕಾಪಿಕಾಡ್, ಉದ್ಯಮಿ ವಾಸುದೇವ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ್ ನಾಯಕ್, ಕರ್ನಾಟಕ ಮಾಧ್ಯಮ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯಕ್ರಮ ಸಂಚಾಲಕ ಗೋಪಿನಾಥ ಭಟ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಿರಿಧರ ಶೆಟ್ಟಿ, ರಂಗ ಸಂಗಾತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ, ನರೇಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು. ಜಾದೂಗಾರ ಕುದ್ರೋಳಿ ಗಣೇಶ್ ಅವರು ಜಾದೂ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದರು.
ಶಶಿರಾಜ್ ಕಾವೂರು ಪ್ರಸ್ತಾವಿಕವಾಗಿ ಮಾತನಾಡಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
(((ಬಾಕ್ಸ್))
ಫಾಲ್ಕೆ ಪ್ರಶಸ್ತಿ ಸಿಗಬೇಕಿತ್ತು ಎಂದ ರಿಷಬ್ ಶೆಟ್ಟಿ
ನಾಡು ಕಂಡ ಅದ್ವಿತೀಯ ಕಲಾವಿದ ಅನಂತನಾಗ್ ಅವರಿಗೆ ದೇಶ ನೀಡಿರುವ ಗೌರವ ಸಾಲದು ಎಂದು ಹೇಳಿದ ‘ಕಾಂತಾರ’ ಖ್ಯಾತಿಯ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ, ಭಾರತೀಯ ಚಿತ್ರರಂಗದ ಜೀವಮಾನದ ಸಾಧನೆಗೆ ನೀಡಲಾಗುವ ದಾದಾ ಸಾಹೇಬ್ ಫಾಲ್ಕೆ ಅಥವಾ ಉನ್ನತ ನಾಗರಿಕ ಪುರಸ್ಕಾರ ಪದ್ಮವಿಭೂಷಣ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಂತನಾಗ್ ಅವರು ನಟನೆಯ ಬಳಿಕ, ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಮಲಯಾಳಿ ಶಿಕ್ಷಕರು ಬಂದರೆ ಜನರು ಧ್ವನಿ ಎತ್ತುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ. ಇದು ಅನಂತ್‌ನಾಗ್ ಅವರ ನಟನೆಯ ತಾಕತ್ತು ಎಂದರು.
((( ಬಾಕ್ಸ್)))
ವೆಂಕಟರಮಣನ ವಿಗ್ರಹ, ಮಲ್ಲಿಗೆ ಕಟ್ಟು...
ವೆಂಕಟರಮಣ ದೇವರ ವಿಗ್ರಹ, ಬೆಳ್ಳಿಯ ವೀಳ್ಯದ ಎಲೆ, ಕಂಬಳದ ಬೆತ್ತ, ಫಲ, ಪೇಟ ನೀಡಿ ಅನಂತನಾಗ್ ಅವರನ್ನು ಗೌರವಿಸಲಾಯಿತು. ಮಲ್ಲಿಗೆ ಹೂವಿನ ಅಟ್ಟೆ, ಗೆಂದಾಳಿ ಬೊಂಡ, ಸೀರೆ, ಪಿಂಗಾರ ಹೂವು, ಸೀರೆ, ಬಳೆ, ಅರಸಿನ ಕುಂಕುಮ ತುಂಬಿದ ಡಬ್ಬಿ ನೀಡಿ ಗಾಯತ್ರಿ ಅನಂತ್‌ನಾಗ್ ಅವರನ್ನು ಸನ್ಮಾನಿಸಲಾಯಿತು.
((( ಬಾಕ್ಸ್)))
ದೃಷ್ಟಿ ತೆಗೆದ ಮಹಿಳೆಯರು
ಭಾಷಣ ಆರಂಭಿಸಿದ ನಿರ್ದೇಶಕ ರಿಷಬ್ ಶೆಟ್ಟಿ, ಅನಂತ್‌ನಾಗ್ ಅವರು ಇಂದಿಗೂ ಚಿರಯುವಕನಂತೆ ಇದ್ದಾರೆ. ಅವರು ಹೀಗೆಯೇ ಇರಬೇಕು ಎಂದು ಹೇಳಿ ಸಭೆಯಲ್ಲಿ ಇದ್ದ ಎಲ್ಲ ಮಹಿಳೆಯರು ಎದ್ದು ನಿಂತು ಅನಂತ್‌ನಾಗ್ ಅವರ ದೃಷ್ಟಿ ತೆಗೆಯುವಂತೆ ಮನವಿ ಮಾಡಿದರು. ಮಹಿಳೆಯರು ರಿಷಬ್ ಕೋರಿಕೆಯನ್ನು ಪಾಲಿಸಿದರು.