ಅನಂತಶ್ರೀ ಪ್ರಶಸ್ತಿ ಪ್ರದಾನ ಅ.1ರಂದು

K.P.Hegde Golagod
Published on

ಸಿದ್ದಾಪುರ: ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಅನಂತ ಯಕ್ಷ ಕಲಾ ಪ್ರತಿಷ್ಠಾನ ನಡೆಸುವ ಅನಂತೋತ್ಸವ ಹಾಗೂ ಅನಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 1ರಂದು ಸಂಜೆ 5ರಿಂದ ಆಯೋಜನೆಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಖ್ಯಾತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ ಯಕ್ಷ ಗುರು ಹಾಗೂ ಹಿರಿಯ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಗೋಳಗೋಡ ಅವರಿಗೆ ಪ್ರತಿಷ್ಠಾನ ನೀಡುವ ಅನಂತ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಅಭಿನಂದನಾ ಮಾತನಾಡಲಿದ್ದಾರೆ.

ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಕಲಗದ್ದೆಯ ಯಕ್ಷ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ, ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್​ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ಉಪಸ್ಥಿತರಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಅಧ್ಯಕ್ಷತೆವಹಿಸಲಿದ್ದಾರೆ.

ನಂತರ ವಿಶ್ವಶಾಂತಿ ಸರಣಿಯ ರೂಪಕ ಶ್ರೀಕೃಷ್ಣಂ ವಂದೇ ಯಕ್ಷನೃತ್ಯ ರೂಪಕ ಕು.ತುಳಸಿ ಹೆಗಡೆ ಬೆಟ್ಟಕೊಪ್ಪ ಅವರಿಂದ ಪ್ರದರ್ಶನಗೊಳ್ಳಲಿದೆ.

ಹಿಮ್ಮೇಳದಲ್ಲಿ ಭಾಗತವರಾಗಿ ಕೇಶವ ಹೆಗಡೆ ಕೊಳಗಿ,ಮದ್ದಳೆಯಲ್ಲಿ ಶಂಕರ ಭಾಗ್ವತ ಯಲ್ಲಾಪುರ, ಚಂಡೆಯಲ್ಲಿ ವಿಘ್ನೕಶ್ವರ ಗೌಡ ಕೆಸರಕೊಪ್ಪ ಹಾಗೂ ಪ್ರಸಾದನದಲ್ಲಿ ವೆಂಕಟೇಶ ಹೆಗಡೆ ಬಗ್ರಿಮಕ್ಕಿ ಸಹಕರಿಸಲಿದ್ದಾರೆ ಎಂದು ಕೇಶವ ಹೆಗಡೆ ಕೊಳಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net