

ರಾಯಚೂರು: ಕೋಮು ದ್ವೇಷದ ಹೇಳಿಕೆ ನೀಡುತ್ತಿರುವ ಉತ್ತರ ಕನ್ನಡ ಸಂಸದ ಅನಂತರಕುಮಾರ ಹೆಗಡೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೆಪಿಸಿಸಿ ವಕ್ತಾರ ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದಂತೆ ರಾಜ್ಯದಲ್ಲಿನ ಕೆಲವು ಮಸೀದಿಗಳನ್ನು ಧ್ವಂಸ ಮಾಡುತ್ತೇವೆ. ಹಿಂದು ಸಮಾಜ ಸಾವಿರ ವರ್ಷಗಳ ದ್ವೇಷ ತೀರಿಸಿಕೊಳ್ಳುತ್ತದೆ ಎಂದು ಹೇಳುವ ಮೂಲಕ ಜಾತಿ, ಜನಾಂಗಗಳ ನಡುವೆ ದ್ವೇಷ ಮೂಡುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಸಂಸದರಾದ ನಾಲ್ಕು ವರ್ಷಗಳಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅಜ್ಞಾತವಾಗಿದ್ದ ಅನಂತಕುಮಾರ ಹೆಗಡೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಜನರನ್ನು ಸೆಳೆಯುವುದಕ್ಕಾಗಿ ದ್ವೇಷದ ಮಾತುಗಳನ್ನಾಡುತ್ತಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡಾ ಮಥುರಾ ಸೇರಿ ಇತರ ಮಸೀದಿಗಳನ್ನು ಮುಸ್ಲಿಮರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸದಿದ್ದಲ್ಲಿ ಪರಿಣಾಮ ಏನಾಗಬಹುದು ಎನ್ನುವುದು ನಮಗೆ ತಿಳಿದಿಲ್ಲ ಎನ್ನುವ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ ವಿರುದ್ಧ ಕೂಡ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಡಾ.ರಜಾಕ್ ಉಸ್ತಾದ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.