ಅನಂತ ಸ್ವರ ನಮನ ಸಂಗೀತೋತ್ಸವ 23ರಿಂದ

ce1d68d3-3467-4dde-92e2-c8120ff9ed01
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರು ದಶಕಗಳ ಕಾಲ ಸಂಗೀತ, ಸಾಂಸ್ಕೃತಿಕ ಲೋಕದ ಕಲಾವಿದರು ಹಾಗೂ ಶ್ರೋತೃ ವರ್ಗದ ಕೊಂಡಿಯಾಗಿದ್ದ ಅನಂತ ಹರಿಹರ, ಯುವ ಕಲಾವಿದರಿಗೆ ಸ್ಫೂರ್ತಿ ತುಂಬಿದವರು. ಅವರ ನೆನಪಿಗೆ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​, ಕ್ಷಮತಾ ಸಂಸ್ಥೆ ಆಶ್ರಯದಲ್ಲಿ ಅನಂತ ಸ್ವರ ನಮನ ಸಂಗೀತೋತ್ಸವ ಆಯೋಜಿಸಲಾಗಿದೆ.
ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಭವನದಲ್ಲಿ ಆ. 23,24 ಹಾಗೂ 25ರಂದು ನಿತ್ಯ ಸಂಜೆ 5 ಗಂಟೆಗೆ ಗಾಯನ, ವಾದನಗಳ ನಿನಾದ ರಿಂಗಣಿಸಲಿದೆ. ಸಂಗೀತೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿತಿನ ಢವಳೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​, ಕರ್ನಾಟಕ ಬ್ಯಾಂಕ್​ ಹಾಗೂ ಕೆನರಾ ಬ್ಯಾಂಕ್​ ಸಹ ಕೈ ಜೋಡಿಸಿವೆ.
ಆ. 23ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಗಾಯಕರಾದ ಪಂ. ಎಂ. ವೆಂಕಟೇಶಕುಮಾರ, ಪಂ. ಗಣಪತಿ ಭಟ್​ ಹಾಸಣಗಿ, ಪಂ. ಶ್ರೀನಿವಾಸ ಜೋಶಿ, ಪಂ. ಕೈವಲ್ಯಕುಮಾರ ಗುರವ, ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್​. ಚನ್ನೂರ, ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಪಾಲ್ಗೊಳ್ಳಲಿದ್ದಾರೆ. ಆ. 25ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಪಂ. ಶ್ರೀಪಾದ ಹೆಗಡೆ ಕಂಪ್ಲಿ ಹಾಗೂ ವಯೋಲಿನ್​ ವಾದಕ ಪಂ. ಬಿ.ಎಸ್​. ಮಠ ಭಾಗವಹಿಸಲಿದ್ದಾರೆ.
ಆ. 23 ರಂದು ಸುಜಯೀಂದ್ರ ಕುಲಕರ್ಣಿ, ಶುಭಾಂಗಿ ಜಾಧವ, ಡಾ. ವಿಜಯಕುಮಾರ ಪಾಟೀಲ ಅವರಿಂದ ಗಾಯನ, ಆ. 24ರಂದು ಪಂ. ಕೃಷ್ಣೇಂದ್ರ ವಾಡೀಕರ, ಅಯ್ಯಪ್ಪಯ್ಯ ಹಲಗಲಿಮಠ ಗಾಯನ, ಬೆಂಗಳೂರಿನ ಸಸರ್ಫರಾಜ್ ಖಾನ್​ ಅವರಿಂದ ಸಾರಂಗಿ ವಾದನ, ವೀಣಾ ಮಠ ವಯೋಲಿನ್​ ವಾದನ ಪ್ರಸ್ತುತಪಡಿಸಲಿದ್ದಾರೆ.
ಆ. 25ರಂದು ನಿಖಿಲ್​ ಜೋಶಿ, ಉ. ಮೊಹಸೀನ್​ ಖಾನ್​ ಅವರಿಂದ ಸಿತಾರವಾದನ ಹಾಗೂ ಬೆಂಗಳೂರಿನ ಶಿವಾನಿ ಮಿರಜಕರ ಜೈನ್​ ಹಾಗೂ ಕುಮಾರ ಮರಡೂರ ಗಾಯನ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿ ಕೇಶವ ಜೋಶಿ, ನಿಸ್ಸಾರ ಅಹ್ಮದ, ಶ್ರೀಧರ ಮಾಂಡ್ರೆ, ಡಾ. ಶ್ರೀಹರಿ ದಿಗ್ಗಾವಿ, ಜಯತೀರ್ಥ ಪಂಚಮುಖಿ, ಅಕ್ಷಯ ಭಟ್ಟ, ಹೇಮಂತ ಜೋಶಿ ಸಾಥ್​ ನೀಡಲಿದ್ದಾರೆ. ಸತೀಶ ಭಟ್ಟ ಹೆಗ್ಗಾರ, ಸಾರಂಗ ಕುಲಕರ್ಣಿ, ಬಸವರಾಜ ಹಿರೇಮಠ, ವಿನೋದ ಪಾಟೀಲ ಹಾಮೋರ್ನಿಯಂ ಸಾಥ್​ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net