

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಭಾರತೀಯ ಸಂಗೀತ ವಿದ್ಯಾಲಯ, ದಾಸಾ ಟ್ರಸ್ಟ್ಗಳು ಭೂಪಲಾಪುರ ಪ್ರತಿಷ್ಠಾನ ಹಾಗೂ ಪ್ರಶಾಂತ ನರ್ಸಿಂಗ್ ಹೋಂ ಸಹಯೋಗದಲ್ಲಿ ಜು. 7ರಂದು ಸಂಜೆ 5.30ಕ್ಕೆ ಸೃಜನಾ ರಂಗ ಮಂದಿರದಲ್ಲಿ "ಅನಂತ ನಮನ' ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿದ್ಯಾಲಯ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಂತ ಹರಿಹರ ಅವರು ಅನೇಕ ವರ್ಷಗಳ ಕಾಲ ಭಾರತೀಯ ಸಂಗೀತ ವಿದ್ಯಾಲಯದ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಯಶಸ್ವಿ ಸಂಘಟಕ, ರಾಯಭಾರಿಯಾಗಿ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ನೆನಪಿಗಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಗಾಯಕ ಪಂ. ಎಂ.ವೆಂಕಟೇಶಕುಮಾರ ಗಾಯನದೊಂದಿಗೆ ಸಮಾರಂಭ ಆರಂಭವಾಗಲಿದ್ದು, ಅವರಿಗೆ ಗುರುಪ್ರಸಾದ ಹೆಗಡೆ (ಹಾರ್ಮೋನಿಯಂ), ಶ್ರೀಧರ ಹೆಗಡೆ (ತಬಲಾ) ಸಾಥ್ ನೀಡುವರು. ನಂತರದಲ್ಲಿ ಧಾರವಾಡ ಘರಾಣೆಯ ಖಾನ್ ಸಹೋದರರಾದ ಛೋಟೆ ರಹಿಮತ್ ಖಾನ್, ಶಫೀಕ್ ಖಾನ್, ರಫೀಕ್ ಖಾನ್, ರಯೀಸ್ ಖಾನ್, ಹಫೀಜ್ ಖಾನ್ ಹಾಗೂ ಮೊಹಸಿನ್ ಖಾನ್ ಸಿತಾರ ನುಡಿಸಲಿದ್ದಾರೆ. ಪಂ. ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ ಎಂದರು.
ಖಾನ್ ಸಹೋದರರು ಏಕಕಾಲದಲ್ಲಿ ಸಿತಾರ ವಾದನ ನುಡಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಸಂಗೀತ ಹಾಗೂ ಸಿತಾರ ವಾದನ ಮೂಲಕ ಅನಂತ ಹರಿಹರ ಅವರಿಗೆ ನಮನ ಸಲ್ಲಿಸಲಾಗುತ್ತಿದೆ. ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಫೀಕ್ ಖಾನ್, ಪ್ರವಿಣ ಹೂಗಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.