ದೇಶದ ಮಕ್ಕಳಾಗಿ ಸಾಧನೆ ಮಾಡಿ: ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ದೇವರು ಸಲಹೆ

Ananta Award Ceremony Mandya
Published on

ಮಂಡ್ಯ: ದೇಶದ ಮಕ್ಕಳಾಗಿ ಸಾಧನೆ ಮಾಡಲು ಪ್ರಯತ್ನಿಸುವವರೇ ನಿಜವಾದ ಭಾರತೀಯ ಮಕ್ಕಳು ಎಂದು ವಿಜಯಪುರ ಸಿದ್ದಲಿಂಗೇಶ್ವರ ಮಹಾಮಠದ ಸಿದ್ದಲಿಂಗ ದೇವರು ಹೇಳಿದರು.

ನಗರದ ಅಭಿನವ ಭಾರತಿ ಶಾಲಾ ಆವರಣದಲ್ಲಿ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್, ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಅನಂತಕುಮಾರ ಸ್ವಾಮೀಜಿ ಅವರ 88ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಅನಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಜೀವನದಲ್ಲಿ ಸಾಧನೆ ಮಾಡದೆ ಮರೆಯಾಗಬಾರದು. ಪ್ರಸ್ತುತ ಜೀವನ ನಡೆಸಲು ಡಾಕ್ಟರ್, ಇಂಜಿನಿಯರ್, ಅಧಿಕಾರಿಯಾಗಲು ಓದುವುದನ್ನು ಆರಂಭಿಸುತ್ತಾರೆ. ಜತೆಗೆ ಮನೆ ಮಕ್ಕಳಾಗಿಯಷ್ಟೇ ಜೀವನ ಸಾಗಿಸುತ್ತಾರೆ. ಆದರೆ ದೇಶ ಸೇವೆಗಾಗಿ ಹಂಬಲಿಸಿ ಸಾಧನೆ ಮಾಡುವ ಪ್ರತಿಯೊಬ್ಬರೂ ನಿಜವಾದ ಭಾರತೀಯರು ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ವಿದ್ಯಾರ್ಥಿಗಳು ಶಿಸ್ತು ಬಳಸಿಕೊಂಡರೆ ಜ್ಞ್ಞಾನ ಬರುತ್ತದೆ. ಇದರಿಂದ ಅಧಿಕಾರ ಹಾಗೂ ಸಂಪತ್ತು ಎಲ್ಲವನ್ನೂ ಪಡೆಯಬಹುದೆಂದು ಹಿರಿಯರು ಹೇಳಿದ್ದಾರೆ. ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಕೆಎಎಸ್ ಮತ್ತು ಐಎಎಸ್ ಮಾಡುವ ಕನಸನ್ನು ನನಸು ಮಾಡಿಕೊಳ್ಳುವುದರಲ್ಲಿ ಹಿಂದೆ ಇದ್ದಾರೆ, ಇದಕ್ಕೆ ಆಸಕ್ತಿ ಕೊರತೆಯೇ ಕಾರಣವಾಗಿದೆ ಎಂದು ವಿಷಾದಿಸಿದರು.

ಗುರುಗಳು ಮತ್ತು ಪಾಲಕರು ವಿದ್ಯಾರ್ಥಿ ದಿಸೆಯಲ್ಲಿಯೇ ದೊಡ್ಡ ಅಧಿಕಾರದ ಕನಸು ಕಾಣಬೇಕು. ಅದರಂತೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗುವ ರೀತಿಯಲ್ಲಿ ಕನಸು ಬಿತ್ತುವ ಕೆಲಸವಾಗಬೇಕು. ಆ ಮೂಲಕ ಸಾಧನೆ ಮಾಡಿ ದೊಡ್ಡ ಅಧಿಕಾರ ಪಡೆಯಲು ಸಹಕರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ, ಎಂಎಲ್‌ಸಿ ಕೆ.ವಿವೇಕಾನಂದ, ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆ ಉಪಾಧ್ಯಕ್ಷ ರಾಮಲಿಂಗಯ್ಯ, ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ, ಎಸ್.ಬಿ. ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಪಶುವೈದ್ಯ ಡಾ.ಜಯರಾಂ ಅವರಿಗೆ ಅನಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net