

ಮಂಡ್ಯ: ಪ್ರಸ್ತುತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕಾದ ಅವಶ್ಯಕತೆ ಇದೆ ಎಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಹಾಗೂ ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಅನಂತಕುಮಾರ ಸ್ವಾಮೀಜಿ ಅವರ 87ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಅನಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಇವತ್ತು ಎಷ್ಟು ಓದಿದ್ದೇವೆ, ಎಷ್ಟು ಪದವಿ ಪಡೆದಿದ್ದೇವೆ, ಎಷ್ಟು ಅವಿಷ್ಕಾರಗಳನ್ನು ನಡೆಸಿದ್ದೇವೆ ಎನ್ನುವುದು ಮುಖ್ಯವಲ್ಲ. ಬದಲಿಗೆ ನಮ್ಮ ನಡುವಿನ ಜನರಿಗೆ ಎಷ್ಟು ಬೆಳಕನ್ನು ಚೆಲ್ಲಿದ್ದೇವೆ ಎನ್ನುವುದು ಮುಖ್ಯವಾಗಬೇಕಿದೆ ಎಂದು ನುಡಿದರು.
ಸ್ವಾತಂತ್ರ್ಯ ಬಂದ ದಿನಗಳ ದೇಶದಲ್ಲಿ ಸಾಕ್ಷರತೆ ಶೇ.15ರಷ್ಟು ಇತ್ತು. ಈಗ ಶೇ.85ರಷ್ಟು ಸಾಕ್ಷರತೆ ಇದೆ. ಆದರೆ ಹಿಂದೆ ಸಾಕ್ಷರತೆ ಕಡಿಮೆ ಇತ್ತು, ಸಂಸ್ಕಾರ ಹೆಚ್ಚಿತ್ತು, ಈಗ ಸಾಕ್ಷರತೆ ಹೆಚ್ಚಿದರೂ ಸಂಸ್ಕಾರ ಕಡಿಮೆಯಾಗಿದೆ. ಶಿಕ್ಷಣವಿದ್ದರೆ ನಮ್ಮನ್ನು ಎಡವಲು ಬಿಡದು, ಸಂಸ್ಕಾರವಿದ್ದರೆ ನಿಮ್ಮನ್ನು ಕೆಡವಲು ಬಿಡದು. ಇಂದು ಬಹುತೇಕರು ನಮ್ಮ ಕಷ್ಟ ಮಕ್ಕಳಿಗೆ ಬರದಿರಲಿ, ನೋವು ಅನುಭವಿಸದಿರಲಿ ಎನ್ನುವ ತಂದೆ ತಾಯಿ ಅಂದುಕೊಳ್ಳುತ್ತಾರೆ. ಆದರೆ ಇಂತಹ ಮನೋಭಾವನೆ ತಪ್ಪು. ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಅಗತ್ಯವಿದೆ ಎಂದು ಕಿವಿಮಾತೇಳಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಯೋಗ ರೋಗವನ್ನು ಬರದಂತೆ ತಡೆದಿಡುವ ಒಂದು ಮದ್ದು. ಯೋಗಗಳನ್ನು ಹೇಳುವುದು ಸುಲಭ ಮಾಡುವುದು ಕಷ್ಟ. ಅನಂತಕುಮಾರಸ್ವಾಮೀಜಿ ಅವರ ಸೇವೆಯನ್ನು ದೇವರ ಸೇವೆ ಎಂದು ಮಾಡಿದವರು. ಅದರ ಫಲವಾಗಿ ಅಭಿನವ ಭಾರತಿ ಶಿಕ್ಷಣ ಸಮೂಹ ಸಂಸ್ಥೆಗಳು ಬೆಳೆದವು. ಈಗ ಶಿವಮೂರ್ತಿ ಕೀಲಾರ ಅವರು ಶಾಲೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದರು.
ಚಂದನವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಮಿಯಾಮಿ ಫ್ಲೋರಿಡಾ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಡಿ. ಹಲ್ಲೆಗೆರೆ ಮೂರ್ತಿ, ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಇತರರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಮತ್ತು ಆಧ್ಯಾತ್ಮಕ ಕ್ಷೇತ್ರದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ವೈದ್ಯಕೀಯ ಕ್ಷೇತ್ರದಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್, ಯೋಗ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಯೋಗಾತ್ಮ ಶ್ರೀಹರಿ ಅವರಿಗೆ ಅನಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂತೆಯೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.