

ಕಲಬುರಗಿ: ಅತಿ ಹೆಚ್ಚು ಕಸ ಬರುವುದು ಅಡುಗೆ ಮನೆ. ಮದುವೆ ಮನೆಗಳಲ್ಲಿ ಪ್ಲಾಸ್ಟಿಕ್ ಬಟ್ಟಲು, ಚಮಚ, ಬೀಡಾ, ಐಸ್‌ಕ್ರೀಂ, ಪ್ಲೇಟ್ ಸಹ ಪ್ಲಾಸ್ಟಿಕ್‌ಮಯ ಆಗುತ್ತಿದೆ. ಊಟಕ್ಕಿಂತ ಹೆಚ್ಚು ಪ್ಲಾಸ್ಟಿಕ್ ಬಳಕೆ ಆಗುತ್ತದೆ. ಇದರಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತಿವೆ. ವಿಂಗಡಣೆಯೇ ಆಗುತ್ತಿಲ್ಲ ಎಂದು ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ ಬೇಸರ ವ್ಯಕ್ತಪಡಿಸಿದರು.
ನಗರದ ಸೇಡಂ ರಸ್ತೆಯಲ್ಲಿನ ಸ್ವಾಭಿಮಾನ ಸ್ವದೇಶಿ ಕೇಂದ್ರದಲ್ಲಿ ಅದಮ್ಯ ಚೇತನ ಸಂಸ್ಥೆಯಿAದ ಸೋಮವಾರ ಏರ್ಪಡಿಸಿದ್ದ ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟನೆ, ನಿತ್ಯ ಅನ್ನದಾನ ಪ್ರಾರಂಭ, ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಸಿಯೂಟದ ಜತೆಗೆ ಕಸದ ಸಮಸ್ಯೆ ನೀಗಿಸಿ, ಪರಿಸರ ಜಾಗೃತಿ ಮೂಡಿಸಲು ೨೦೦೯ರಲ್ಲಿ ಶೂನ್ಯ ತ್ಯಾಜ್ಯ ಅಡುಗೆ ಮನೆ ಯೋಜನೆ ಆರಂಭಿಸಿದ್ದೇವು ಎಂದು ಹೇಳಿದರು.
ಕಳೆದ ೨೫ ವರ್ಷದಿಂದ ಅದಮ್ಯ ಚೇತನ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಬಿಸಿಯೂಟದ ಜತೆಗೆ ಪರಿಸರ ರಕ್ಷಣೆಯ ಕಾರ್ಯ ಮಾಡುತ್ತಿದ್ದು, ಮದುವೆ ಮನೆ, ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ತಟ್ಟೆ, ಚಮಚ, ಬಟ್ಟಲು ಬಳಸಿ, ಊಟಕ್ಕಿಂತ ಹೆಚ್ಚು ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಆದ್ದರಿಂದ ಪ್ಲೇಟ್ ಬ್ಯಾಂಕ್ ಆರಂಭಿಸಲಾಗಿದೆ. ಎಲ್ಲರೂ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ೬೦ ಸಾವಿರ, ಹುಬ್ಬಳ್ಳಿಯಲ್ಲಿ ೮೦ ಸಾವಿರ, ಕಲಬುರಗಿಯಲ್ಲಿ ೧೫ ಸಾವಿರ ಮಕ್ಕಳಿಗೆ ಬಿಸಿಯೂಟ ನೀಡುತ್ತಿದ್ದೇವೆ. ನಗರ ಕೇಂದ್ರೀತ ಮಾಡದೆ ಹುಬ್ಬಳ್ಳಿಯಲ್ಲಿ ಸುತ್ತಲಿನ ಗ್ರಾಮಗಳಿಗೂ ಊಟ ನೀಡುತ್ತಿದ್ದೇವೆ. ರಾಜಸ್ಥಾನದ ಜೋಧಪುರದಲ್ಲಿ ಅಡುಗೆ ಮನೆ ಆರಂಭಿಸಿದ್ದೇವೆ. ರುಚಿ, ಶುಚಿ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೇಯರ್ ವಿಶಾಲ ದರ್ಗಿ ಮಾತನಾಡಿ, ಅದಮ್ಯ ಚೇತನ ಸಂಸ್ಥೆಯಿಂದ ಅತ್ಯುತ್ತಮ ಸಾಮಾಜಿಕ ಕಾರ್ಯಗಳು ನಡೆಯುತ್ತಿದ್ದು. ಅವರ ಸೇವಾ ಕಾರ್ಯಗಳು ನಮಗೆಲ್ಲ ಸ್ಫೂರ್ತಿದಾಯಕ. ಈ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಂಸ್ಥೆ ಟ್ರಸ್ಟಿಗಳಾದ ಪ್ರದೀಪ ಓಕ, ಡಾ.ದೇವಸುಧಾಕರ ಪಾಟೀಲ್, ಕೂಡಾ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ ಇತರರಿದ್ದರು. ಅನೀಲ ತಂಬಾಕೆ ನಿರೂಪಣೆ ಮಾಡಿದರು.
ಸಸ್ಯಾಗ್ರಹ: ನಗರದ ಸಾಯಿ ಮಂದಿರದ ಬಳಿ ಡಾ.ತೇಜಸ್ವಿನಿ ಅನಂತಕುಮಾರ ಅವರು ಗಿಡ ನೆಟ್ಟು ಸಸ್ಯಾಗ್ರಹ ಯೋಜನೆಗೆ ಚಾಲನೆ ನೀಡಿದರು. ಪ್ರಕಾಶ. ಡಾ.ಮಲ್ಲಾರಾವ ಮಲ್ಲೆ, ಮಹೇಶ ಹೊಸುರಕರ್, ಪ್ರಮೋದ ದೇಶಪಾಂಡೆ, ನಾರಾಯಣ ಜಹಾಗೀರದಾರ, ಶ್ವೇತಾ ಸರಾಫ್, ಡಾ.ಪ್ರೇಮಸಿಂಗ್ ಚವ್ಹಾಣ್ ಇತರರಿದ್ದರು.
ಕಾರ್ಯಕ್ರಮಕ್ಕೆ ಪ್ಲೇಟ್ ಬೇಕಾದ್ರೆ ಸಂಪರ್ಕಿಸಿ: ಮದುವೆ, ನಾಮಕರಣ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಊಟಕ್ಕೆ ಪ್ಲಾಸ್ಟಿಕ್ ಪ್ಲೇಟ್, ಗ್ಲಾಸ್ ಚಮಚ, ಬಟ್ಟಲು ಬಳಸಲಾಗುತ್ತಿದೆ. ಇದರಿಂದ ಕಾರ್ಯಕ್ರಮದ ನಂತರ ತ್ಯಾಜ್ಯವಾಗಿ ಹಲವು ಸಮಸ್ಯೆ ಸೃಷ್ಟಿಯಾಗುತ್ತಿವೆ. ಆದ್ದರಿಂದ ಅದಮ್ಯ ಚೇತನ ಸಂಸ್ಥೆಯಿAದ ಕಲಬುರಗಿಯ ಸ್ವದೇಶಿ ಸ್ವಾಭಿಮಾನ ಮಳಿಗೆಯಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಆರಂಭಿಸಲಾಗಿದೆ. ಪ್ಲಾಸ್ಟಿಕ್ ಬಳಸುವುದು ಕೈಬಿಟ್ಟು ಉಚಿತವಾಗಿ ಸ್ಟೀಲ್ ಪ್ಲೇಟ್, ಗ್ಲಾಸ್, ಬಟ್ಟಲು, ಚಹಾ ಬಟ್ಟಲು, ಚಮಚಗಳನ್ನು ಪಡೆಯಬಹುದು. ನಂತರ ತೊಳೆದು ವಾಪಸ್ ಬ್ಯಾಂಕ್‌ಗೆ ನೀಡಬೇಕು. ಇಲ್ಲಿ ಒಟ್ಟು ೫೦೦ ಸೆಟ್ ಸಾಮಗ್ರಿ ಇದ್ದು, ಅಗತ್ಯವಿದ್ದಲ್ಲಿ ಬ್ಯಾಂಕ್ ನಿರ್ವಾಹಕ ಅಕ್ಷಯ ಕುಲ್ಕರ್ಣಿ (೯೮೮೬೯೭೫೧೨೮) ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಸಂಸ್ಥೆ ಟ್ರಸ್ಟಿ ಪ್ರದೀಪ ಓಕ್ ಮಾಹಿತಿ ನೀಡಿದರು.
ನಿತ್ಯ ಅನ್ನದಾನ ಆರಂಭ: ಬಡವರು, ವಿಶೇಷವಾಗಿ ಆಸ್ಪತ್ರೆಯ ರೋಗಿಗಳ ಜತೆಗೆ ಬರುವವರಿಗೆ ಮಧ್ಯಾಹ್ನ ಊಟ ನೀಡಲು ಅದಮ್ಯ ಚೇತನದಿಂದ ಉಚಿತ ನಿತ್ಯ ಅನ್ನದಾನ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. ನಗರದ ಸೇಡಂ ಸಮೀಪದ ಇಎಸ್‌ಐ ಆಸ್ಪತ್ರೆ ಬಳಿ ೨೦೦ ಜನರಿಗೆ ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ ೧.೩೦ರಿಂದ ಅನ್ನದಾನ ನಡೆಯಲಿದೆ ಎಂದು ಪ್ರದೀಪ ಓಕ್ ತಿಳಿಸಿದರು.