

ಬೆಟ್ಟದಪುರ: ಬೆಟ್ಟದಪುರದಿಂದ ಅವರ್ತಿ ಮಾರ್ಗವಾಗಿ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಆನಂದನಗರ ಗ್ರಾಮದ ಬಳಿ ಬೃಹತ್ ಗುಂಡಿಗಳು ಬಾಯ್ತೆರೆದ ಪರಿಣಾಮ ನಿತ್ಯ ವಾಹನ ಸವಾರರು ಸಂಚಾರ ಮಾಡಲು ಸರ್ಕಸ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಬೆಟ್ಟದಪುರದಿಂದ ಮಡಿಕೇರಿ ಜಿಲ್ಲೆಯ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚಾರ ಮಾಡುತ್ತವೆ. ರಸ್ತೆಯ ಮಾರ್ಗದ ಹಲವೆಡೆ ಗುಂಡಿಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ಹರಸಹಾಸಪಡುವ ಪರಿಸ್ಥಿತಿ ಎದುರಾಗಿದೆ.
ಸುಮಾರು ಐದಾರು ವರ್ಷಗಳ ಹಿಂದೆ ರಸ್ತೆಗೆ ಡಾಂಬರೀಕರಣವಾಗಿದ್ದು, ನಿರಂತರ ಮಳೆ ಹಾಗೂ ವಾಹನಗಳ ಸಂಚಾರದ ದಟ್ಟಣೆಯಿಂದ ಈ ಮಾರ್ಗದ ಹಲವೆಡೆ ಬೃಹತ್ ಗಾತ್ರದ ಗುಂಡಿಗಳು ಬಾಯ್ತೆರೆದಿದೆ. ಅಲ್ಲದೆ ಮಳೆ ಬಂದಂತಹ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿದ ಪರಿಣಾಮ ದೊಡ್ಡ ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ನೀರು ಹಾರುವುದರಿಂದ ತೀವ್ರ ಸಮಸ್ಯೆಗಳು ಉಂಟಾಗುತ್ತಿದೆ. ಇದಲ್ಲದೆ ಗುಂಡಿಗಳಿಂದ ವಾಹನ ಸವಾರರಿಗೆ ಅಪಘಾತವಾಗಿ ಪೆಟ್ಟು ತಿಂದಿರುವ ಉದಾಹರಣೆಗಳು ಸಹ ಇವೆ.
ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗಣಿಗಾರಿಕೆ ಹಾಗೂ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಲಾರಿಗಳು ನಿತ್ಯ ಎಂ-ಸ್ಯಾಂಡ್, ಕಲ್ಲಿನಪುಡಿ, ಜಲ್ಲಿಕಲ್ಲುಗಳು ಸೇರಿದಂತೆ ಕಲ್ಲುಗಳನ್ನು ತುಂಬಿಕೊಂಡು ನಿಗದಿತ ಸ್ಥಳಕ್ಕೆ ತಲುಪಿಸಲು ಈ ರಸ್ತೆಯಲ್ಲಿಯೇ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಲಾರಿ, ಬೃಹತ್ ವಾಹನಗಳ ಓಡಾಟದಿಂದಲೂ ರಸ್ತೆ ಬಹುಬೇಗನೆ ಗುಂಡಿಬಿದ್ದು ಹಾಳಾಗಿದೆ. ನಿಗದಿತ ಸಾಮರ್ಥ್ಯಕಿಂತ ಹೆಚ್ಚಿನ ಮಟ್ಟದಲ್ಲಿ ತೂಕ ತುಂಬಿಕೊಂಡು ಸಂಚಾರ ಮಾಡುವುದೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಆಯುಕ್ತರು ಹಾಗೂ ತಾಲೂಕು ಆಡಳಿತವು ಗಮನಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.