

ಅರಸೀಕೆರೆ : ಆಧುನಿಕತೆ ಬೆಳೆದಂತೆ ಮನೋವಿಜ್ಞಾನ ಚಿಕಿತ್ಸಾ ಕ್ಷೇತ್ರವೂ ವಿಸ್ತರಿಸಿರುವುದು ಮಹತ್ವದ ಸಂಗತಿ ಎಂದು ಹಾರನಹಳ್ಳಿ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಮಹದೇಶ್ವರ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಮತ್ತು ವಿಜಯವಾಣಿ ಅಂಕಣಕಾರ ಧಾರವಾಡದ ಡಾ. ಆನಂದ ಕೆ.ಪಾಂಡುರಂಗಿ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಸುಖ, ಜೀವನ ಹೆಚ್ಚಾದಷ್ಟೂ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದಾನೆ. ಒತ್ತಡ ಬದುಕಿನ ಯಾಂತ್ರಿಕ ಜೀವನದಲ್ಲಿ ಸಂಬಂಧ, ಮಾನವೀಯ ಮೌಲ್ಯಗಳು ಮರೆಯಾಗಿವೆ. ಆಪ್ತ ಸಂವಾದ ಮತ್ತು ಸಲಹೆಗಳು ತುಮುಲಗಳಿಗೆ ಪರಿಹಾರ ನೀಡಲಿವೆ. ಈ ನಿಟ್ಟಿನಲ್ಲಿ ಪಾಂಡುರಂಗಿ ಅವರ ಜ್ಞಾನ, ಸರಳತೆ, ಸಜ್ಜನಿಕೆಗಳು ನೊಂದ ಸಾವಿರಾರು ಜನರಿಗೆ ಆತ್ಮಸ್ಥೈರ್ಯ ತುಂಬಿವೆ. ಇದು ಮಹತ್ತರ ಸೇವೆ ಎಂದರು.
ಬಹುಜನರ ಮನೋವೇದನೆಯನ್ನು ತಮ್ಮ ಮೃದು ಮಾತುಗಳಿಂದಲೇ ಬಹುಪಾಲು ಗುಣಪಡಿಸುತ್ತ, ಸುಂದರ ಸಮಾಜ ನಿರ್ಮಾಣಕ್ಕೆ ಪಾಂಡುರಂಗಿ ಅವರು ಬದುಕನ್ನು ಮೀಸಲಾಗಿ ಇಟ್ಟಿದ್ದಾರೆ. ಹದಿಹರೆಯದ ಸಮಸ್ಯೆ, ಬಾಲಕಾರ್ಮಿಕ ಮುಕ್ತ ಸಮಾಜಕ್ಕಾಗಿ ಇವರು ಅಪಾರ ಕೊಡುಗೆ ನೀಡಿದ್ದಾರೆ. ಮಠದ ಗೌರವದಿಂದ ಇವರ ಸೇವಾ ವ್ಯಾಪ್ತಿ ವೇಗ ಹೆಚ್ಚಾಗಲಿ ಎಂದು ಸ್ವಾಮೀಜಿ ಆಶಿಸಿದರು.
ಉದ್ಯಮಿ ಮೃತ್ಯುಂಜಯ ಸಂಕೇಶ್ವರ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.