

ಉಡುಪಿ: ಕರ್ನಾಟಕದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿರುವ ಉಡುಪಿ, ಕಡಲತೀರಗಳಿಗೆ ಮಾತ್ರವಲ್ಲ, ಸಾಂಪ್ರದಾಯಿಕ ಪಾಕವಿಧಾನಗಳಿಗೂ ಫೇಮಸ್. ಪ್ರವಾಸಿಗರು ಮತ್ತು ಆಹಾರಪ್ರಿಯರು ಇಲ್ಲಿಗೆ ಅದರ ವಿಶಿಷ್ಟವಾದ ಸಮುದ್ರಾಹಾರದ ರುಚಿಯನ್ನು ಅರಸಿ ಬರುತ್ತಾರೆ.
ಇದೀಗ ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ ನ ಸಿಬ್ಬಂದಿ ಉಪಹಾರ ಮೆನುವನ್ನು ಹೇಳುವ ಶೈಲಿಗೆ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಮನ ಸೋತಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ವಿಸಿಟ್ ಉಡುಪಿ ಎನ್ನುವ ಪೇಜ್ ನಲ್ಲಿ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್‌ನ ಸಿಬ್ಬಂದಿ ನಿರರ್ಗಳವಾಗಿ ಉಪಹಾರ ಮೆನು ಹೇಳುತ್ತಿರುವ ವಿಡಿಯೋ ಹಂಚಿಕೊಂದಿರುವ ಆನಂದ್ ಮಹೀಂದ್ರಾ, 'ಚಾಟ್ ಜಿಪಿಟಿ ಇಂದ ಜೆನೆರೇಟ್ ಮಾಡಲಾದ ಉಪಹಾರ ಮೆನು ಕೂಡ ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್‌ನ ಈ ವ್ಯಕ್ತಿಯ ಸಾಮರ್ಥ್ಯಕ್ಕೆ ಹೊಂದಿಕೆಯಾಗುವುದಿಲ್ಲ. ಇದು ನನ್ನ ನಿರಂತರವಾಗಿ ವಿಸ್ತರಿಸುತ್ತಿರುವ ಪ್ರಯಾಣ ಬಕೆಟ್ ಪಟ್ಟಿಯಲ್ಲಿ ಮುಂದಿನದು. Incredible Udupi' ಎಂದಿದ್ದಾರೆ.
ಮಹೀಂದ್ರಾ ಅವರ ಈ ಪೋಸ್ಟ್ ನೋಡಿ ಕರಾವಳಿಗರು ಸಂತಸ ವ್ಯಕ್ತಪಡಿಸಿದ್ದು, "ಆನಂದ್ ಸರ್ ಅವರನ್ನು ಕರ್ನಾಟಕ ಬ್ರಾಂಡ್ ಅಂಬಾಸಿಡರ್ ಮಾಡಿ, ಅದ್ಭುತ ಶೋಧನೆ, ಬಹಳ ಚೆನ್ನಾಗಿದೆ, ದಕ್ಷಿಣ ಭಾರತದ ಉಪಹಾರ ಮೆನುಗೆ ಯಾವುದೂ ಹೊಂದಿಕೆಯಾಗುವುದಿಲ್ಲ !'' ಎಂದೆಲ್ಲಾ ಕಾಮೆಂಟ್ ಮಾಡಿದ್ದು, ಈ ವಿಡಿಯೋ ನೋಡಿದ ನಿಮಗೂ ಹಾಗನಿಸದೆ ಇರಲಾರದು.