ಆನಂದ ಅಪ್ಪುಗೋಳ ಆಸ್ತಿ ಜಪ್ತಿಗೆ ಸೂಚನೆ

Anand Appugol
Published on

ಬೆಳಗಾವಿ: ಆನಂದ ಅಪ್ಪುಗೋಳ ನೇತೃತ್ವದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟು ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಹಕರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ಆನಂದ ಅಪ್ಪುಗೋಳ, ಆತನ ಕುಟುಂಬಸ್ಥರು ಮತ್ತು ಆತನ ಹೆಸರಿನಲ್ಲಿ ಮಾಡಿರುವ ಬೇನಾಮಿ ಆಸ್ತಿಯನ್ನು ಜಿಲ್ಲಾ ನ್ಯಾಯಾಲಯದ ನಿರ್ದೇಶನದ ಆನ್ವಯ ಸರ್ಕಾರ ವಶಕ್ಕೆ ಪಡೆಯುತ್ತಿದೆ. ಈ ಕಾರ್ಯಕ್ಕೆ ನ್ಯಾಯಾಲಯವು ಬೆಳಗಾವಿ ಉಪವಿಭಾಗಾಧಿಕಾರಿಯನ್ನು ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಅವರು ಸಂಬಂಧಪಟ್ಟ ತಹಸೀಲ್ದಾರ್, ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿ, ಅಪ್ಪುಗೋಳ ಅವರಿಗೆ ಸಂಬಂಧಪಟ್ಟ ಆಸ್ತಿಯನ್ನು ಸರ್ಕಾರಿ ಹೆಸರಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಆಸ್ತಿಗಳು ಸರ್ಕಾರದ ಹೆಸರಲ್ಲಿ ವರ್ಗಾವಣೆ ಆದ ಬಳಿಕ ಅವುಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜಿನಲ್ಲಿ ಬರುವ ಹಣ ಗ್ರಾಹಕರಿಗೆ ಮರುಪಾವತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಖಾನಾಪುರ, ಬೈಲಹೊಂಗಲ ಮತ್ತು ಮೂಡಲಗಿ ತಾಲೂಕುಗಳಲ್ಲಿ ಹೆಚ್ಚಿನ ಕೃಷಿ ಭೂಮಿ, ಆಸ್ತಿಯನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆನಂದ ಸೇರಿ ಪತ್ನಿ, ಸೊಸೈಟಿ ಕಾರ್ಯದರ್ಶಿ 2018ರಿಂದ ಜೈಲಿನಲ್ಲಿದ್ದಾರೆ. ಅವರ ಮೇಲೆ 5 ಸಾವಿರ ಪ್ರಕರಣಗಳು ಗ್ರಾಹಕರ ನ್ಯಾಯಾಲಯದಲ್ಲಿ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net