

ನುಗ್ಗೇಹಳ್ಳಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 60 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹಲಸಂದೆ ಬೆಳೆಯಲು ಬಾಣನಕೆರೆ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್‌ಕುಮಾರ್ ಮಾಹಿತಿ ನೀಡಿದರು.
ಬಾಣನಕೆರೆ ಗ್ರಾಮದ ರೈತರಿಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಗುರುವಾರ ಉಚಿತ ಹಲಸಂದೆ ಬೀಜದ ಕಿಟ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಿಂದ ಜನಸಂಖ್ಯೆ ಬೆಳೆದಂತೆ ಆಹಾರ ಪದಾರ್ಥಗಳ ಬೆಳೆಗಳನ್ನು ಹೆಚ್ಚು ಬೆಳೆಯಲು ಆಯ್ದ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಉಚಿತ ಬೀಜ, ಗೊಬ್ಬರ ಇತರ ಪರಿಕರಗಳನ್ನು ಹಂತಹಂತವಾಗಿ ರೈತರಿಗೆ ವಿತರಿಸಲಾಗುತ್ತದೆ. ಚೆನ್ನಾಗಿ ಬೆಳೆ ಬೆಳೆದ ರೈತರ ಜಮೀನಿಗೆ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪ್ರಾತ್ಯಕ್ಷತೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದರು.
ಬಿತ್ತನೆ ಬೀಜಕ್ಕೆ ಕೆಮಿಕಲ್ ಮಿಕ್ಸ್ ಮಾಡಲಗಿದೆ. ಬಿತ್ತನೆ ಬೀಜವನ್ನು ನೀರಿನಿಂದ ತೊಳೆದರೂ ಸಹ ಕೆಮಿಕಲ್ ಇರುತ್ತದೆ ದಯಮಾಡಿ ಇದನ್ನು ತಿನ್ನಲು ಉಪಯೋಗಿಸಬಾರದು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಮಾತನಾಡಿ, ಬಾಣನಕೆರೆ ಗ್ರಾಮದ ರೈತರು ಚೆನ್ನಾಗಿ ಕೃಷಿ ಮಾಡುತ್ತಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅವರು ಈ ಗ್ರಾಮವನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಮಳೆ ಬಿದ್ದ ತಕ್ಷಣ ಅಲಸಂದೆ ಬಿತ್ತನೆ ಬೀಜ ವನ್ನು ಬಿತ್ತನೆ ಮಾಡಿ ಸಾವಯವ ಕೃಷಿ ಮಾದರಿಯಲ್ಲಿ ಬೆಳೆ ಬೆಳೆದು ಮಾದರಿಯಾಗಬೇಕು ಎಂದು ತಿಳಿಸಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜೀ.ವಿ.ದಿನೇಶ್, ವಿಜಯಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಅಶೋಕ್, ಡೇರಿ ಕಾರ್ಯದರ್ಶಿ ರಮೇಶ್, ಪರಮೇಶ್, ಮಂಜೇಗೌಡ, ಜಗದೀಶ್, ಇತರರು ಹಾಜರಿದ್ದರು.