ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯ

22 myk
Published on

ಮಾಯಕೊಂಡ: ಆನಗೋಡು ಹೋಬಳಿಯ ಹಲವಾರು ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಬೆಸ್ಕಾಂ ಕಾರ್ಯ ಮತ್ತು ಕಾರ್ಯಪಾಲನ ಉಪವಿಭಾಗ ಕಚೇರಿಯ ಎದುರು ಹಲವು ಗ್ರಾಮಗಳ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಮಾತನಾಡಿ, ಆನಗೋಡು ಬೆಸ್ಕಾಂ ವ್ಯಾಪ್ತಿಯಲ್ಲಿ ರೈತರ ಪಂಪ್​ಸೆಟ್ ಹಾಗೂ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಮರ್ಪಕವಾಗಿಲ್ಲ. ಪ್ರತಿದಿನ 5-6 ಗಂಟೆ ಲೋಡ್ ಶೆಡ್ಡಿಂಗ್ ಮಾಡುತ್ತಾರೆ. ವಿದ್ಯುತ್ ಏರುಪೇರಿನಿಂದ ಪಂಪ್​ಸೆಟ್​ಗಳು ಸುಟ್ಟು ಹೋಗುತ್ತಿದೆ ಎಂದರು.

ಈಗಾಗಲೇ 35 ಡಿಗ್ರಿ ಉಷ್ಣಾಂಶದಿಂದ ವಾಣಿಜ್ಯ ಬೆಳೆಗಳು ಬಳಲಿ ಹೋಗುತ್ತಿವೆ. ಅಧಿಕಾರಿಗಳು ಯಾವುದೇ ಕಾರಣ ನೀಡದೇ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಆಗಸನಕಟ್ಟೆ ಜಗದೀಶ್ ಮಾತನಾಡಿ, ಪ್ರತಿದಿನವೂ ಲೈನ್ ಟ್ರಬಲ್ ಆಗಿದೆ ಎನ್ನುವ ನೆಪವೊಡ್ಡಿ ಬೆಸ್ಕಾಂನವರು ಪದೇ ಪದೆ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದೇ ರೀತಿ ಆದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಸ್ಕಾಂ ಎಇಇ ಕೆ.ಎನ್. ತೀರ್ಥೇಶ್ ಮಾತನಾಡಿ, ಆನಗೋಡು ಬೆಸ್ಕಾಂನ ಎಲ್ಲ ಫೀಡರ್​ಗಳು ಓವರ್​ಲೋಡ್ ಆಗಿವೆ. ವಾಣಿಜ್ಯ ಬೆಳೆಗಳ ಪ್ರದೇಶ ವಿಸ್ತರಣೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹೊಸಳ್ಳಿ ಬಳಿ ನೂತನ ಪವರ್ ಸ್ಟೇಷನ್ ಕಾರ್ಯಾರಂಭವಾಗಿದ್ದು ಆನಗೋಡು ಬೆಸ್ಕಾಂ ವ್ಯಾಪ್ತಿಯ ಹಲವು ಫೀಡರ್​ಗಳನ್ನು ಅದರ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದರು.

ಮಾಯಕೊಂಡ ಹೋಬಳಿಯ ಕಬ್ಬೂರು ಹಾಗೂ ತೋಳಹುಣಸೆ ಗ್ರಾಮಗಳಲ್ಲಿ ನೂತನ ಬೆಸ್ಕಾಂ ಪವರ್ ಸ್ಟೇಷನ್ ನಿರ್ವಣಕ್ಕೆ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದರು.

ಗ್ರಾಪಂ ಸದಸ್ಯ ಅಗಸನಕಟ್ಟೆ ಭೀಮಣ್ಣ, ಸಿ.ಎಸ್. ಶಿವಕುಮಾರ್, ಎಂ. ನವೀನ್ ಸಿದ್ದಲಿಂಗಪ್ಪ, ಮಹೇಶ್, ರವಿಕುಮಾರ್ ಸಿದ್ದನೂರು ಬಸವರಾಜಯ್ಯ, ಎಸ್.ಜಿ. ಗಿರೀಶ್, ಎ.ವಿ. ನಾಗರಾಜ್, ಎ.ಜಿ. ನಾಗರಾಜ್, ಹಲವು ಗ್ರಾಮಗಳ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net