ರಸ್ತೆ ಒತ್ತುವರಿ ತೆರವುಗೊಳಿಸಿ

12121
Published on

ಬೆಳಗಾವಿ: ಅನಗೋಳದ ನಾಥಪೈ ನಗರದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಾಥಪೈ ನಗರದಲ್ಲಿ 1.28 ಎಕರೆ ಪ್ರದೇಶ 1976ರಲ್ಲಿಯೇ ಎನ್.ಎ. ಆಗಿದೆ. ಈ ಬಡಾವಣೆಯಲ್ಲಿ ಹಲವು ವರ್ಷಗಳಿಂದ 1 ರಿಂದ 40 ನಿವೇಶನಗಳಲ್ಲಿ ಅನೇಕ ಜನರು ವಾಸಿಸುತ್ತಿದ್ದಾರೆ. ಆದರೆ, ನಿವೇಶನ ನಂ 36ರ ಮಾಲೀಕರೊಬ್ಬರು 10 ಅಡಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಸ್ಥಳೀಯರಿಗೆ ಓಡಾಡಲು ಕಷ್ಟವಾಗುತ್ತಿದೆ ಎಂದು ನಿವಾಸಿಗಳು ದೂರಿದರು.

ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಸ್ತೆ ತೆರವುಗೊಳಿಸಲು ಆಗ್ರಹಿಸಿದರೆ ಬೆದರಿಕೆ ಹಾಕುತ್ತಿದ್ದಾರೆ. ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ.

ಸ್ಥಳೀಯರಿಗೆ ಓಡಾಡಲು ಪರ್ಯಾಯ ರಸ್ತೆ ಇಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ರಸ್ತೆ ತೆರವುಗೊಳಿಸಲು ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ನಿವಾಸಿಗಳು ಕೋರಿದರು. ಪ್ರಕಾಶ ಹೊಸೂರಕರ, ರಾವಸಾಬ ಮಾನೆ, ಉಮೇಶ ಪೋಟೆ, ಯಲ್ಲಪ್ಪ ಪೋಟೆ, ಶ್ರೀಕಾಂತ ತಹಸೀಲ್ದಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net