ಅನಾಥ ನಿಧಿ ಸ್ಥಾಪಿಸಲು ಚಿಂತನೆ

Anaburu, farmer, relief,
Published on

ಜಗಳೂರು: ಜಗಳೂರು ತಾಲೂಕಿನ ಅನಾಥ ಮಕ್ಕಳಿಗೆ ನೆರವಾಗಲು ಅನಾಥ ನಿಧಿ ಸ್ಥಾಪಿಸಲಾಗುತ್ತಿದ್ದು ಈ ಸಂಬಂಧ ತಿಂಗಳಿಗೊಮ್ಮೆ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹಿಸುವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ತಾಲೂಕಿನ ಅಣಬೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅನಾಥ ನಿಧಿಗೆ ನನ್ನ ಸಂಬಳದಲ್ಲಿ 50 ರೂ. ಹಾಕಿ ಸಮಾನ ಮನಸ್ಕರಿಂದ ನಿಧಿ ಕ್ರೂಢೀಕರಿಸಲು ಬಯಸಿದ್ದೇನೆ ಎಂದರು.

ಗ್ರಾಮಸ್ಥರ ಬೇಡಿಕೆಯಂತೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಹಂತ ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಪಿಡಿಒಗೆ ಎಚ್ಚರಿಕೆ: ಐದು ಗ್ಯಾರಂಟಿಗಳಿಗೆ ಸರ್ಕಾರವೆಂಬ ದೇವರು ವರ ಕೊಟ್ಟಿದೆ. ಪೂಜಾರಿಗಳಾದ ನಾವು ಫಲಾನುಭವಿಗಳಿಗೆ ತಲುಪಿಸಬೇಕು. ಅದಕ್ಕೆ ಬೇಕಾದ ಎಲ್ಲ ದಾಖಲೆ ಒದಗಿಸಬೇಕು ಎಂದು ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಪ್ರಭು ಮಾತನಾಡಿ, ನರೇಗಾ ಯೋಜನೆ ಪೂರ್ಣಪ್ರಮಾಣದಲ್ಲಿ ನಡೆದು ಕೂಲಿಕಾರರಿಗೆ ಕೆಲಸ ನೀಡಬೇಕು. ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಬೇಕು. ಪಿಡಿಒ,ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳಬೇಕು. ಅಧಿಕಾರಿಗಳ ತಂಡದೊಂದಿಗೆ ಗ್ರಾಮದಲ್ಲಿ ಸಂವಾದ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬೇಕು ಎಂದರು.

ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ದೇಶ ನಿರುದ್ಯೋಗ ಸಮಸ್ಯೆಯಿಂದ ನಲುಗುತ್ತಿದ್ದಾಗ ಬಡವರಿಗೆ ವರ್ಷದಲ್ಲಿ ನೂರು ದಿನಗಳ ಕಾಲ ಕೂಲಿ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಇದಕ್ಕೆ 60 ಸಾವಿರ ಕೋಟಿ ರೂ. ಮೀಸಲಿಡಬೇಕು. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಷರತ್ತು ಹಾಕಿ ಕೆಲಸಕ್ಕೆ ಬ್ರೇಕ್ ಹಾಕುತ್ತಿದೆ ಎಂದು ಟೀಕಿಸಿದರು.

ಗ್ರಾಪಂ ಅಧ್ಯಕ್ಷೆ ಕವಿತಾ ರೇಣುಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಮಹದ್, ಗ್ರಾಪಂ ಉಪಾಧ್ಯಕ್ಷೆ ಸಣ್ಣನಾಗಮ್ಮ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ.ಶೇಖರಪ್ಪ, ಮುಖಂಡರಾದ ಕಲ್ಲೇಶ್‌ರಾಜ್ ಪಟೇಲ್, ಸಿ. ತಿಪ್ಪೇಸ್ವಾಮಿ, ಕಾನನಕಟ್ಟೆ ಪ್ರಭು, ನಾಗರಾಜ ನಾಯಕ, ಗುರುಮೂರ್ತಿ, ವಿಜಯಕೆಂಚೋಳ್, ಬರ್ಕತ್ ಅಲಿ, ಅಹಮದ್ ಅಲಿ ಮತ್ತಿತರಿದ್ದರು.

ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ: ಅಣಬೂರು ಗ್ರಾಮದ ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟ ರೈತರಾದ ಕಾಟಪ್ಪ, ರಾಜಪ್ಪ ಅವರ ಕುಟುಂಬಗಳಿಗೆ ವಿಪತ್ತು ಪರಿಹಾರ ನಿಧಿಯಡಿ ತಲಾ ಐದು ಲಕ್ಷ ರೂ. ಪರಿಹಾರ ಚೆಕ್‌ನ್ನು ಶಾಸಕ ದೇವೇಂದ್ರಪ್ಪ ವಿತರಿಸಿದರು. ಅಲ್ಲದೆ, ವೈಯಕ್ತಿಕವಾಗಿ ತಲಾ 25 ಸಾವಿರ ರೂ. ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net