

* 6 ತಿಂಗಳಲ್ಲಿ 65 ಮದುವೆ, 52 ಎಫ್‌ಐಆರ್ ದಾಖಲು
* ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ದಶಕಗಳ ಹಿಂದೆ ಅನಿಷ್ಠ ದೇವದಾಸಿ ಪದ್ಧತಿಗೆ ಕುಖ್ಯಾತಿಯಾಗಿದ್ದ ಅಖಂಡ ಬಳ್ಳಾರಿಯ ಪಶ್ಚಿಮ ತಾಲೂಕುಗಳಲ್ಲಿ ಇದೀಗ ಬಾಲ್ಯ ವಿವಾಹ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ.
ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಒಳಗೊಂಡು ರಚನೆಯಾಗಿರುವ ವಿಜಯನಗರ ಜಿಲ್ಲೆಯಲ್ಲಿ ಇತ್ತೀಚೆಗೆ ದೇವದಾಸಿ ಪದ್ಧತಿ ನಿರ್ಮೂಲನೆಯತ್ತ ಸಾಗಿದ್ದರೂ, ಅಪ್ರಾಪ್ತರ ಮದುವೆಯ ಅಳಲು ಆಗಾಗ ಬೆಳಕಿಗೆ ಬರುತ್ತಿವೆ. ಸರ್ಕಾರ, ಸಂಘ, ಸಂಸ್ಥೆಗಳಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೂ, ಜಿಲ್ಲೆಯ ಕುಗ್ರಾಮ, ತಾಂಡಗಳಲ್ಲಿ ಅನಕ್ಷರತೆ ಹಾಗೂ ಬಡತನದ ಕಾರಣದಿಂದ ಪುಟ್ಟ ಮಕ್ಕಳನ್ನು ವಿವಾಹ ಬಂಧನವೆAಬ ಕೂಪಕ್ಕೆ ದೂಡುತ್ತಿರುವುದು ಆತಂಕಕಾರಿ ಬೆಳವಣಿಗೆ.
ಕಳೆದ ವರ್ಷಕ್ಕೆ ಹೋಲಿಸಿದರೆ ನೂತನ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ತುಸು ಹೆಚ್ಚಿವೆ. 2022-23ನೇ ಸಾಲಿಗೆ ಇಡೀ ವರ್ಷದಲ್ಲಿ 71 ದೂರುಗಳು ಬಂದಿದ್ದವು. ಅವುಗಳಲ್ಲಿ 3 ಮದುವೆಗಳು ನೆರವೇರಿದ್ದು, 68 ಅಪ್ರಾಪ್ತರ ಮದುವೆಗಳನ್ನು ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ, ಈ ವರ್ಷ ಏಪ್ರಿಲ್‌ನಿಂದ ಸೆಪ್ಟಂಬರ್ ವರೆಗೆ ಮಕ್ಕಳ ಸಹಾಯವಾಣಿ 1098 ಮೂಲಕ ಒಟ್ಟು 103 ದೂರುಗಳು ದಾಖಲಾಗಿವೆ. ಆ ಪೈಕಿ 38 ಮದುವೆಗಳನ್ನು ತಡೆಯಲಾಗಿದ್ದು, 65 ಅಪ್ರಾಪ್ತರ ಮದುವೆಗಳು ನಡೆದಿವೆ. ಈ ಕುರಿತು ವಿವಿಧ ಪೊಲೀಸ್ ಠಾಣೆಯಗಳಲ್ಲಿ 52 ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನುಳಿದಂತೆ 6 ಮದುವೆಗಳಲ್ಲಿ ವಧು- ವರರು ಪ್ರಾಪ್ತ ವಯಸ್ಸಿನವರು ಎಂದು ಪ್ರಕರಣ ಕೈಬಿಡಲಾಗಿದೆ. 4 ಪ್ರಕರಣಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿಲಾಗಿದ್ದು, 3 ಪ್ರಕರಣಗಳ ಎಫ್‌ಆರ್‌ಐ ಇನ್ನಷ್ಟೇ ದಾಖಲಿಸಬೇಕಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಸುಭದ್ರಾದೇವಿ.
ಬರಗಾಲವೂ ಕಾರಣ..?
ಜಿಲ್ಲೆಯಲ್ಲಿ ನಡೆದಿರುವ ಬಾಲ್ಯ ವಿವಾಹಕ್ಕೆ ಬಹುತೇಕ ಬಡತನದ ಜತೆಗೆ ಬರಗಾಲವೂ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಈ ಬಾರಿ ಮುಂಗಾರು ವೈಫಲ್ಯದಿಂದ ಕೃಷಿ ಕಾರ್ಮಿಕರು ಕೂಲಿಗಾಗಿ ಪರ ಊರುಗಳಿಗೆ ವಲಸೆ ಹೋಗುವುದ ರಿಂದ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಜತೆಗೆ ಕರೆದೊಯ್ಯಲಾಗದೇ, ಇತ್ತ ಸ್ವಗ್ರಾಮದಲ್ಲಿ ಬಿಟ್ಟು ಹೋಗಲಾಗದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಸ್ಥಿತಿಯಿಂದ ಪಾರಾಗಲು ಹೆಣ್ಣು ಮಕ್ಕಳ ಮದುವೆ ನೆರವೇರಿಸಿ, ಕಾನೂನು ಕ್ರಮ ಎದುರಿಸುವಂ ತಾಗಿದೆ. ಜಿಲ್ಲೆಯಲ್ಲಿ 65 ಮದುವೆಗಳು ಕಂಡು ಬಂದಿದ್ದು, ಇನ್ನೂ ಬೆಳಕಿಗೆ ಬಾರದ ಪ್ರಕರಣಗಳೂ ಇರಬಹುದು ಎಂಬುದು ಸಾರ್ವಜನಿಕರ ಅನುಮಾನ.
ಅಲ್ಲದೇ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ, ದೇವದಾಸಿ ಪದ್ಧತಿಗಳ ಕುರಿತು ಪರಿಣಾಮಕಾರಿಯಾಗಿ ಜನ ಜಾಗೃತಿ ಮೂಡಿಸಬೇಕಿದೆ. ಆದರೆ, ನೂತನ ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಬ್ಬಂದಿ ಕೊರತೆಯ ಜತೆಗೆ ಅನುದಾನ ಬಿಡುಗಡೆಯೂ ವಿಳಂಬವಾಗಿದ್ದರಿಂದ ಜನ ಜಾಗೃತಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಆದರೂ, ಬಾಲ್ಯ ವಿವಾಹ ಕುರಿತು ಮಾಹಿತಿ ಬರುತ್ತಿದ್ದಂತೆ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಇಲಾಖೆ ಅಧಿಕಾರಗಳ ಮಾತು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಸೇರಿದಂತೆ ಸಾಮಾಜಿಕ ಅನಿಷ್ಠಗಳನ್ನು ತಡೆಯುವ ನಿಟ್ಟಿನಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯ ಶಶಿಧರ ಕೂಸುಂಬೆ ನಿರ್ದೇಶನದಂತೆ ಈ ಹಿಂದಿನ ವರ್ಷದ ಬಾಲ್ಯ ವಿವಾಹಗಳಿಗೆ ಸಂಬಂಧಿಸಿ ಈ ವರ್ಷ ಪ್ರಕರಣ ದಾಖಲಿಸಿದ್ದರಿಂದ ಸಂಖ್ಯೆ ಹೆಚ್ಚಾಗಿದೆ ಅಷ್ಟೇ. ಆದರೂ, ಈ ರೀತಿಯ ಅನಿಷ್ಠಗಳು ಕಂಡು ಬಂದಲ್ಲಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು. - ಬಿ.ಸದಾಶಿವ ಪ್ರಭು, ಜಿ.ಪಂ. ಸಿಇಒ