ಯಾತ್ರಾಸ್ಥಳ ಗೋಕರ್ಣದಲ್ಲಿ ನನಸಾಗದ ಯೋಜನೆ

GOKARNA
Published on

ಗೋಕರ್ಣ: ಮುಖ್ಯಮಂತ್ರಿ ಆದೇಶ, ಸಂಬಂಧಿಸಿದ ಇಲಾಖೆಗಳ ಶಿಫಾರಸು ಮತ್ತು ಬೇರೆ ಬೇರೆ ಇಲಾಖೆಗಳ ಪ್ರಯತ್ನ ನಡುವೆಯೂ ಪ್ರಖ್ಯಾತ ಯಾತ್ರಾಸ್ಥಳ ಗೋಕರ್ಣದಲ್ಲಿ ಒಳಚರಂಡಿ ಯೋಜನೆ ಜಾರಿಯಾಗಿಲ್ಲ.

ದಶಕಗಳ ತನಕ ವಿವಿಧ ಇಲಾಖೆಗಳ ಪತ್ರ, ಪ್ರತ್ಯುತ್ತರ ಮತ್ತು ಸ್ಥಳ ಸರ್ವೇಯೊಂದಿಗೆ ಕೊನೆಗೊಂಡ ಒಳಚರಂಡಿ ಯೋಜನೆ ಇಂದಿಗೂ ಗೋಕರ್ಣದ ಮಟ್ಟಿಗೆ ಕನಸಿನ ಗಂಟಾಗಿದೆ.

90ರ ದಶಕದಿಂದೀಚೆಗೆ ಗೋಕರ್ಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಟೆಲ್, ವಸತಿ ವ್ಯವಸ್ಥೆ ತೀವ್ರ ಗತಿಯಲ್ಲಿ ಬೆಳೆದಿದೆ. ಪ್ರವಾಸೋದ್ಯಮದ ನಾನಾ ಅವಶ್ಯಕ ವ್ಯವಸ್ಥೆಗಾಗಿ ಐನೂರಕ್ಕೂ ಹೆಚ್ಚಿನ ಬಗೆ ಬಗೆಯ ವಸತಿ ವ್ಯವಸ್ಥೆಗಳಿವೆ. ಆಧುನಿಕ ಸೌಲಭ್ಯಗಳಿಗೆ ಸಹಜವಾಗಿ ಸ್ವಚ್ಛವಾದ ನಾಲೆಗಳು ಮತ್ತು ಒಳಚರಂಡಿಯಂತಹ ವ್ಯವಸ್ಥೆ ಅಗತ್ಯವಾಗಿದೆ. ಆದರೆ, ಈ ಏರ್ಪಾಟುಗಳ ಕೊರತೆಯಿಂದಾಗಿ ಸಾರ್ವಜನಿಕ ಗಟಾರ, ಹಳ್ಳಗಳು ಮತ್ತು ನಾಲೆಗಳಿಗೆ ಕೊಳಚೆ ನೀರು ಬಿಡುವ ಅಸಹಾಯಕತೆ ಸೃಷ್ಟಿಯಾಗಿದೆ. ಇದರಿಂದಾಗಿ ಪ್ರಸಿದ್ಧ ಪ್ರವಾಸಿ ಕೇಂದ್ರ ತೆರೆದ ಚರಂಡಿಯಾಗಿ ಪರಿವರ್ತನೆಯಾಗುವಂತಾಯಿತು.

ಬಾರಿ ಸಿಎಂ ಗಮನಕ್ಕೆ

ಮೊದಲ ಬಾರಿಗೆ 2009ರಲ್ಲಿ ಮಹಾಶಿವರಾತ್ರಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಆಗಮಿಸಿದ್ದಾಗ ಒಳಚರಂಡಿ ಯೋಜನೆ ಕುರಿತು ಶ್ರೀಮಹಾಬಲೇಶ್ವರ ಮಂದಿರದಿಂದ ಗಮನಕ್ಕೆ ತರಲಾಗಿತ್ತು. ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಲು ಅಂದಿನ ಜಿಲ್ಲಾಧಿಕಾರಿಗೆ ಸ್ಥಳದಲ್ಲಿಯೇ ಸಿಎಂ ಆದೇಶಿಸಿದರು.

13 ವರ್ಷ ಪ್ರಯತ್ನ

2010ರಲ್ಲಿ ಅಂದಿನ ಜಿಲ್ಲಾಧಿಕಾರಿ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯಡಿ ಸೌಲಭ್ಯ ಪಡೆಯಲು ಗೋಕರ್ಣವನ್ನು ಆಯ್ಕೆಮಾಡಿ ರಾಜ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ ಶಿಫಾರಸು ಮಾಡಿದರು. ಇದನ್ನು ಅನುಸರಿಸಿ ಅಂದಿನ ಯಡಿಯೂರಪ್ಪ ಸರ್ಕಾರ 13.5 ಕೋಟಿ ರೂ. ಯೋಜನಾ ಮೊತ್ತವನ್ನು ನಿಗದಿ ಪಡಿಸಿ ರಾಜ್ಯ ಒಳಚರಂಡಿ ಮಂಡಳಿಗೆ ಆದೇಶವನ್ನೂ ನೀಡಿತು. ಅನುದಾನದ ಭರವಸೆಯನ್ನು ಪಡೆದ ರಾಜ್ಯ ಒಳಚರಂಡಿ ಮಂಡಳಿ ಖಾಸಗಿ ಸಂಸ್ಥೆಯ ಸಹಾಯದಿಂದ ಗೋಕರ್ಣದಲ್ಲಿ ಒಳಚರಂಡಿ ನಿರ್ಮಾಣದ ಬಗ್ಗೆ ಸರ್ವೇ ನಡೆಸಿ ನೀಲಿನಕ್ಷೆಯನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿತು.
2012ರಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಜಿಪಂಗೆ ಸಂಪೂರ್ಣ ನೈರ್ಮಲ್ಯ ಆಂದೋಲನ ಯೋಜನೆ ಮುಖಾಂತರ ಒಳಚರಂಡಿ ಸಂಬಂಧದ ಅನುದಾನ ವಿವರ, ಸಮುದಾಯ ವಂತಿಗೆ ಮತ್ತು ನಂತರದ ನಿರ್ವಹಣಾ ಜವಾಬ್ದಾರಿ ಕುರಿತಾದ ವರದಿಯನ್ನು ತುರ್ತಾಗಿ ರವಾನಿಸುವಂತೆ ಆದೇಶಿತು. ಇದೇ ವರ್ಷ ಜಿಪಂ ಇಂಜಿನಿಯರಿಂಗ್ ಇಲಾಖೆ ಧಾರವಾಡದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವೃತ್ತಕ್ಕೆ ಯೋಜನೆಯ ಅನುಮತಿಗೆ ಮನವಿ ಮಾಡಿ, ಸರ್ಕಾರ ಯೋಜನೆ ಮಂಜೂರು ಮಾಡಿದಲ್ಲಿ ಅದರ ನಿರ್ವಹಣಾ ಹೊಣೆಯನ್ನು ಸ್ಥಳೀಯ ಗ್ರಾಪಂ ಸಮ್ಮತಿಸಿರುವ ಬಗ್ಗೆ ವಿವರ ಸಲ್ಲಿಸಿತು.

ಈ ನಡುವೆ ಸರ್ಕಾರದ ಸೂಚನೆ ಮೇರೆಗೆ ಒಳಚರಂಡಿ ಜತೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಸಮುದ್ರಕ್ಕೆ ಬಿಡುವ ಉದ್ದೇಶದಿಂದ ಕನಿಷ್ಠ ಎರಡು ಎಕರೆ ಜಾಗ ಒದಗಿಸಲು ಸ್ಥಳೀಯ ಗ್ರಾಪಂಗೆ ಜಿಪಂ ತಿಳಿಸಿತು. ಆದರೆ, ತಕ್ಷಣದಲ್ಲಿ ಜಾಗದ ಅಲಭ್ಯತೆಯಿಂದಾಗಿ ಯೋಜನೆ ಹಿನ್ನೆಡೆ ಕಾಣುವಂತಾಯಿತು.
ಗ್ರಾಪಂ ಹೆಸರಿನಲ್ಲಿರುವ ಸಮುದ್ರ ತೀರದ 2 ಎಕರೆ ಸ್ಥಳವನ್ನು ಒದಗಿಸುವ ಭರವಸೆ ನೀಡಿ ಯೋಜನೆ ಕೈಗೆತ್ತಿಕೊಳ್ಳಲು ಜಿಪಂಗೆ 2017 ಮಾರ್ಚ್‌ನಲ್ಲಿ ಲಿಖಿತ ಮನವಿ ನೀಡಿತು. ಅದರೆ, ಸರ್ಕಾರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಂತಿಮವಾಗಿ 2023ರ ಜನೆವರಿಯಲ್ಲಿ ಮತ್ತೆ ಸರ್ಕಾರದ ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಗೋಕರ್ಣ ಕ್ಷೇತ್ರದ ಈ ಯೋಜನೆ ಬಗ್ಗೆ ಆಸ್ಥೆಯಿರುವ ರಾಜ್ಯದ ಕೆಲ ಮಹನೀಯರಿಗೆ ಒಳಚರಂಡಿ ಯೋಜನೆಗಾಗಿ ಮನವಿ ಕೊಡಲಾಗಿದೆ.

ಮೊದಲ ಕೂಗು

ಗೋಕರ್ಣಕ್ಕೆ ಒಳಚರಂಡಿ ಬೇಕು ಎಂಬ ಕೂಗು ಕಳೆದ ನಲವತ್ತು ವರ್ಷಗಳ ಹಿಂದೆಯೇ ಶ್ರೀಮಹಾಬಲೇಶ್ವರ ಅಷ್ಟಬಂಧದ ವೇಳೆ ಕೇಳಿ ಬಂದಿತು. ಅಷ್ಟಬಂಧಕ್ಕಾಗಿ ಹರಿದು ಬಂದ ಲಕ್ಷಾಂತರ ಯಾತ್ರಿಕರಿಂದಾಗಿ ಒಳಚರಂಡಿಯ ಅಗತ್ಯದತ್ತ ಸ್ಥಳೀಯರ ಗಮನ ಸೆಳೆಯಿತು. ಆದರೆ ಬಲವಿಲ್ಲದ ಪ್ರಯತ್ನದಿಂದಾಗಿ ಸರ್ಕಾರ ಕ್ರಮಕ್ಕೆ ಮುಂದಾಗುವಂತೆ ಮಾಡುವಲ್ಲಿ ವಿಫಲವಾಯಿತು.

ಗ್ರಾಪಂ ವತಿಯಿಂದ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಜಾಗ ನೀಡುವಲ್ಲಿನ ವಿಳಂಬದಿಂದ ಯೋಜನೆ ಕೈತಪ್ಪಲು ಕಾರಣವಾಗಿರುವ ಸಾಧ್ಯತೆಗಳಿವೆ. ಆನಂತರದಲ್ಲಿಯೂ ಕಾಲ ಕಾಲಕ್ಕೆ ಗ್ರಾಪಂ ಮತ್ತು ಜಿಪಂ ವತಿಯಿಂದ ಒಳಚರಂಡಿ ನಿರ್ಮಾಣಕ್ಕೆ ಅಗತ್ಯ ಸಹಕಾರ ಮತ್ತು ಮಾಹಿತಿ ನೀಡಿ ಒತ್ತಾಯಿಸುತ್ತ ಬರಲಾಗಿದೆ. ಯೋಜನೆ ಪ್ರಾರಂಭಕ್ಕೆ ಜನವರಿಯಲ್ಲಿ ಪ್ರತ್ಯೇಕ ಮನವಿಯನ್ನು ಗ್ರಾಪಂ ಮೂಲಕ ಸಲ್ಲಿಸಲಾಗಿದೆ.i ವಿನಯಕುಮಾರ, ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net