

ಬಾಹ್ಯಾಕಾಶ ಸಂಬಂಧ ಯಾವುದೇ ದೇಶ ಮಾಡದ ಅನೇಕ ಸಾಧನೆಗಳನ್ನು ಇಸ್ರೋ ಮಾಡಿದೆ. 2047ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಭಾರತವು ಹೊಂದಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಸಮಿತಿ ಸದಸ್ಯ ಪದ್ಮಶ್ರೀ ಡಾ.ಎ.ಎಸ್. ಕಿರಣ್‌ಕುಮಾರ್ ಹೇಳಿದರು.
ನಗರದ ಕಡಕೊಳ ಕೈಗಾರಿಕಾ ಪ್ರದೇಶದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಹ್ಯಾಕಾಶ ತಂತ್ರಜ್ಞಾನ ಕುರಿತಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಚಂದ್ರಯಾನ, ಮಂಗಳಯಾನದ ಬಗ್ಗೆ ಮಾಹಿತಿ ನೀಡಿದರು.
ಸಂವಹನವು ಸರಳಗೊಂಡ ಬಗೆಯನ್ನು ವಿವರಿಸಿದರು. ಬೇರೆ ದೇಶಗಳು 50ರ ದಶಕದಲ್ಲೇ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದಂತಹ ಸಮಯದಲ್ಲಿ ಭಾರತದ ಸಾಧನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಶೂನ್ಯವಾಗಿತ್ತು. ವಿಕ್ರಂ ಸಾರಾಭಾಯಿ ಮುಂತಾದ ಶ್ರೇಷ್ಠ ವಿಜ್ಞಾನಿಗಳು ಛಲಬಿಡದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಮಾಡುವಂತೆ ಇಸ್ರೋವನ್ನು ಕಟ್ಟಿ ಬೆಳೆಸಿದರು. ಇಂದು ಯಾವುದೇ ದೇಶ ಮಾಡದ ಅನೇಕ ಸಾಧನೆಗಳನ್ನು ನಮ್ಮ ದೇಶ ಮಾಡಿದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಡೋಜ ಡಾ.ವುಡೆ ಪಿ.ಕೃಷ್ಣ ಮಾತನಾಡಿ, ಪ್ರತಿ ವಿದ್ಯಾರ್ಥಿಯೂ ಜ್ಞಾನದೊಂದಿಗೆ ಕೌಶಲ ಹೊಂದುವುದು ಅಗತ್ಯ ಎಂದರು. ಪ್ರಥಮ ವರ್ಷದಿಂದಲೇ ವಿದ್ಯಾರ್ಥಿಗಳು ಕೌಶಲ ತರಬೇತಿ ಪಡೆಯುತ್ತಿರುವುದು ಶ್ಲಾಘನೀಯ ಎಂದರು. ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್, ಪ್ರಾಂಶುಪಾಲ ಡಾ.ಪ್ರಹ್ಲಾದ್ ರಾವ್ ಇತರರಿದ್ದರು.