ವಾಯುವಿಹಾರಿಗಳಿಗೆ ತಪ್ಪದ ಕಿರಿಕಿರಿ

YLP KASA
Published on

ಯಲ್ಲಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಪಿಎಂಸಿಯಿಂದ ಹಲಸಖಂಡಕ್ಕೆ ಹೋಗುವ ರಸ್ತೆ ಪಕ್ಕ ಯಾರೋ ರಾಶಿ ರಾಶಿ ಕಸ ತಂದು ಎಸೆಯುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿನಿತ್ಯ ಈ ಸುಂದರ ಪರಿಸರದಲ್ಲಿ ಎಲ್ಲಿಂದಲೋ ಕಸ ತಂದು, ಎಸೆದು ಮಾಲಿನ್ಯ ಉಂಟು ಮಾಡುತ್ತಿರುವುದು ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ.

ವಾಯುವಿಹಾರಕ್ಕೆ ಹೋಗಲು ಪ್ರಶಸ್ತವಾದ ಪರಿಸರದಲ್ಲಿ ಕಸ ಎಸೆಯುವವರ ವಿಕೃತಿಯಿಂದಾಗಿ ಸ್ಥಳೀಯರು ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುವುದು ಒಂದೆಡೆಯಾದರೆ, ರಸ್ತೆಯ ಅಕ್ಕಪಕ್ಕದ ಕಾಡಿನ ಪ್ರದೇಶ ಎಣ್ಣೆ ಪಾರ್ಟಿ, ವೇಶ್ಯಾವಾಟಿಕೆಯಂತಹ ಅಕ್ರಮಗಳು ನಡೆಯುವ ತಾಣವಾಗಿಯೂ ರೂಪುಗೊಂಡಿದೆ.

ಈ ಅಕ್ರಮಗಳು ಹಗಲು-ರಾತ್ರಿಯೆನ್ನದೇ ಎಗ್ಗಿಲ್ಲದೇ ನಡೆಯುತ್ತದೆ. ಸಂಜೆಯ ಮೇಲಂತೂ ಸಭ್ಯಸ್ಥರು ಓಡಾಡಲು ಮುಜುಗರ ಪಡುವಂತಾಗಿದೆ.

ಪಟ್ಟಣದ ತುಂಬ ಕಸದ ಸಮಸ್ಯೆ: ಕೇವಲ ಹಲಸಖಂಡ ರಸ್ತೆ ಮಾತ್ರವಲ್ಲ, ಪಟ್ಟಣದ ಹಲವೆಡೆ ಗ್ರಾಮೀಣ ರಸ್ತೆಗಳ ಪಕ್ಕ ಈ ರೀತಿ ಕಸ ತಂದು ಎಸೆಯುವುದು ಸಾಮಾನ್ಯವಾಗಿದೆ. ಮಾಗೋಡ ರಸ್ತೆಯ ಪಕ್ಕ, ಮಾಗೋಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕ, ಉದ್ಯಮನಗರದಿಂದ ತಟಗಾರ ರಸ್ತೆಯ ಪಕ್ಕ, ಬಿಸಗೋಡ ರಸ್ತೆಯ ಪಕ್ಕ ಹೀಗೆ ಗ್ರಾಮೀಣ ಭಾಗದ ರಸ್ತೆಯಲ್ಲಿ ಹೋಗುವವರನ್ನು ಪಕ್ಕದಲ್ಲಿನ ಕಸದ ರಾಶಿಯೇ ಸ್ವಾಗತಿಸುತ್ತದೆ.

ಕಳೆದ ನಾಲ್ಕಾರು ವರ್ಷಗಳಿಂದ ಈ ಸಮಸ್ಯೆ ಹೆಚ್ಚುತ್ತಲೇ ಇದೆ. ಕಸ ಎಸೆಯುವುದನ್ನು ತಡೆಯಲು ಆಯಾ ಭಾಗದ ಗ್ರಾಮಸ್ಥರು ಅನೇಕ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸಂಬಂಧಪಟ್ಟ ಪಟ್ಟಣ ಪಂಚಾಯಿತಿಯೂ ಯಾವುದೇ ಕ್ರಮಕ್ಕೆ ಮುಂದಾಗದೇ ಈ ಬಗ್ಗೆ ಮೌನ ವಹಿಸಿರುವುದು ಮಾತ್ರ ವಿಚಿತ್ರವಾಗಿದೆ.

ಕಸ ಎಸೆಯುವವರನ್ನು ಕಂಡು ಹಿಡಿದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಸ್ತೆ ಪಕ್ಕದ ಅಕ್ರಮ ವ್ಯವಹಾರಗಳಿಗೆ ಪೊಲೀಸರು ಕಡಿವಾಣ ಹಾಕಬೇಕು. | ನಾಗೇಂದ್ರ ಯಲ್ಲಾಪುರ, ಹಲಸಖಂಡ ಗ್ರಾಮಸ್ಥ

ಕಸದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ರಸ್ತೆ ಪಕ್ಕ ಕಸದ ರಾಶಿಗಳನ್ನು ಎಸೆಯುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಿದ್ದೇವೆ. ಅದರ ಮೂಲಕ ಕಸ ಎಸೆಯುವವರನ್ನು ಗುರುತಿಸಿ, ದಂಡ ವಿಧಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. | ನರ್ಮದಾ ನಾಯ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net