

ರಾಣೆಬೆನ್ನೂರ: ರೈಲ್ವೆ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ 7 ತಿಂಗಳ ಗರ್ಭಿಣಿ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದ್ದು, ಆಕೆಯ ಕುಟುಂಬಸ್ಥರು ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ತಾಲೂಕಿನ ಕರೂರ ಗ್ರಾಮದ ಲಕ್ಷ್ಮೀ ಬಸವರಾಜ ಎಲಿಗಾರ (18 ವರ್ಷ 10 ತಿಂಗಳು) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯು ಕರೂರ ಗ್ರಾಮದ ರೈಲ್ವೆ ಮೇಲ್ಸೇತುವೆಯಿಂದ ಭಾನುವಾರ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಹರಿಹರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಯುವತಿ 7 ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆಯಲ್ಲಿರುವ ಮಗು ಮೃತಪಟ್ಟಿರುವುದು ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಗೆ ಆಗ್ರಹ: ನಗರದ ಕಾಲೇಜ್‌ವೊಂದರಲ್ಲಿ ಪಿಯುಸಿ ಓದು ಮುಗಿಸಿದ್ದ ಲಕ್ಷ್ಮೀ, ಕಂಪ್ಯೂಟರ್ ತರಬೇತಿಗೆ ಬರುತ್ತಿದ್ದಳು. ಭಾನುವಾರ ಖಾಸಗಿ ಆಸ್ಪತ್ರೆಗೆ ತೆರಳಿ ತಾನು ಗರ್ಭಿಣಿಯಾಗಿರುವ ಕುರಿತು ವೈದ್ಯರ ಬಳಿ ಹೇಳಿಕೊಂಡು ಮಗು ತೆಗೆಯಲು ಕೇಳಿಕೊಂಡಿದ್ದಳು. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುವತಿಯನ್ನು ಭೇಟಿ ಮಾಡಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದರು. ಈ ಸಮಯದಲ್ಲಿ ಬಂದ ಯುವಕನೊಬ್ಬ ಪೊಲೀಸರ ದಾರಿ ತಪ್ಪಿಸಿ ‘ಈಕೆ ನನ್ನ ತಂಗಿ, ನಾನು ಮನೆಗೆ ಕರೆದುಕೊಂಡು ಹೋಗುವೆ’ ಎಂದು ಹೇಳಿ ಕರೆದೊಯ್ದು ಕರೂರ ಗ್ರಾಮದ ಮನೆಗೆ ಬಿಟ್ಟು ಹೋಗಿದ್ದಾನೆ. ರಾತ್ರಿ ಮನೆಯಲ್ಲಿಯೇ ಮಲಗಿದ್ದ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಬೆಳಗಿನ ಜಾವ ರೈಲ್ವೆ ಮೇಲ್ಸೇತುವೆಯಿಂದ ಹಾರಿದ್ದಳು.
ಲಕ್ಷ್ಮೀಯನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋದ ಯುವಕ ಯಾರು, ಏಕೆ ಕರೆದುಕೊಂಡು ಹೋದ ಎನ್ನುವ ಕುರಿತು ಸಮಗ್ರ ತನಿಖೆ ನಡೆಸಿದರೆ, ನನ್ನ ಮಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಈ ಕುರಿತು ತನಿಖೆ ನಡೆಸುವಂತೆ ಮೃತಳ ತಾಯಿ ಗೀತಾ ಎಲಿಗಾರ ರೈಲ್ವೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷಕುಮಾರ ಪಾಟೀಲ ಅವರಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಮಗುವಿನ ಡಿಎನ್‌ಎ ಪರೀಕ್ಷೆ: ಮೃತ ಲಕ್ಷ್ಮೀ ಹೊಟ್ಟೆಯಲ್ಲಿದ್ದ ಮಗುವಿನ ಭಾಗವನ್ನು ಡಿಎನ್‌ಎ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ನಡುವೆ ಪೊಲೀಸರಿಗೆ ದೂರು ನೀಡಿರುವ ಮೃತಳ ತಾಯಿ ಗೀತಾ, ‘ಲಕ್ಷ್ಮೀಯನ್ನು ನಾಗರಾಜ ಎಂಬ ಯುವಕ ಪ್ರೀತಿಸುತ್ತಿದ್ದ. ಆತನೇ ಈಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿ ಗರ್ಭಿಣಿಯಾಗಿಸಿದ್ದಾನೆ. ನನ್ನ ಮಗಳ ಸಾವಿಗೆ ಆತನೇ ಕಾರಣವಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಪೊಲೀಸರು ಮಗುವಿನ ಡಿಎನ್‌ಎ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ಬಳಿಕ ಆರೋಪಿಯ ಡಿಎನ್‌ಎ ಪರೀಕ್ಷೆ ಆಗಬೇಕು. ನಂತರ ಯುವತಿ ಗರ್ಭಿಣಿಯಾಗಲು ಆತನೇ ಕಾರಣನೇ, ಇಲ್ಲವೇ ಎಂಬುದು ತಿಳಿಯಲಿದೆ.