ಹಿರೇಕೆರೂರ ಪಟ್ಟಣದಲ್ಲಿ ಬೆಳಗದ ಬೀದಿ ದೀಪ, ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಂಕಟ

Street Light
Published on

ಇಂದುಧರ ಹಳಕಟ್ಟಿ ಹಿರೇಕೆರೂರ

ಪಟ್ಟಣ ಪಂಚಾಯಿತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಸಮರ್ಪಕವಾಗಿ ಬೆಳಗದೆ, ರಾತ್ರಿ ಹೊತ್ತು ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ.

ಇಲ್ಲಿನ ಜಿ.ಬಿ. ಶಂಕರರಾವ್ ವೃತ್ತದಿಂದ ಚಿಕ್ಕೇರೂರ ಕ್ರಾಸ್​ವರೆಗೆ ದ್ವಿಮುಖ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಚೌಡಿ ಸರ್ಕಲ್, ಮಿನಿ ವಿಧಾನಸೌಧದ ಪಕ್ಕದ ಸರ್ಕಲ್, ಸರ್ವಜ್ಞ ವೃತ್ತ, ಬಾಳಂಬೀಡ ಕ್ರಾಸ್ ಬಳಿ ಅಳವಡಿಸಿರುವ ಹೈಮಾಸ್ಟ್ ದೀಪಗಳು ಪದೇಪದೆ ಕೆಟ್ಟು ಹೋಗುತ್ತಿವೆ. ಪಪಂ ಅಧಿಕಾರಿಗಳ ನಿರ್ಲಕ್ಷ್ಯಂದ ಜನರು ಕತ್ತಲಲ್ಲಿ ಓಡಾಡುವ ಪರಿಸ್ಥಿತಿ ನಿರ್ವಣವಾಗಿದೆ.

ಪಟ್ಟಣದಲ್ಲಿ ಇತ್ತೀಚೆಗೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಅಲ್ಲದೆ, ಬೀದಿ ನಾಯಿಗಳ ಹಾವಳಿಯೂ ವಿಪರೀತವಾಗಿದ್ದು, ಪ್ರಮುಖ ರಸ್ತೆ ಮಾರ್ಗ ಕಿರಿದಾಗಿದ್ದರಿಂದ ರಾತ್ರಿಯ ವೇಳೆ ಹಾಗೂ ಬೆಳಗ್ಗೆ ವಾಯುವಿಹಾರ ಮಾಡುವವರು ಹೆದರುತ್ತಲೇ ಹೆಜ್ಜೆ ಇಡುವಂತಾಗಿದೆ. ಸೈಕಲ್ ಸವಾರರು ರಾತ್ರಿ ವೇಳೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪ್ರಸಂಗವೂ ನಡೆದಿದೆ. ಬೀದಿ ನಾಯಿಗಳ ಹಾವಳಿಯಿಂದಾಗಿ ರಾತ್ರಿ ಹೊತ್ತು ಸಂಚರಿಸಲು ಭಯವಾಗುತ್ತಿದೆ ಎಂದು ಹಿರಿಯ ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಪರ ಊರಿನಿಂದ ಬಂದವರು ಬೀದಿನಾಯಿಗಳ ಅಟಾಟೋಪದಿಂದ ಮುಂದಕ್ಕೆ ಹೋಗಲಾಗದೇ ಪರದಾಡುವುದಿದೆ. ಹಲವರು ನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡ ಉದಾಹರಣೆಗಳಿವೆ.

ಆದ್ದರಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ವಿದ್ಯುತ್ ದೀಪ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

ಈಗ ಅಳವಡಿಸಿರುವ ವಿದ್ಯುತ್ ದೀಪಗಳು ಹಳೆಯದಾಗಿವೆ. ಸೋಡಿಯಂ ಬಲ್ಬ್ ಹಾಕಲು ದಂತೆ ಹೆಸ್ಕಾಂನವರು ತಕರಾರು ಎತ್ತಿದರು. ನಂತರ ಸಿಎಫ್​ಎಲ್ ಬಲ್ಬುಗಳನ್ನು ಹಾಕಲಾಗಿತ್ತು. ಆದರೆ, ಹಳೇ ಹೋಲ್ಡರ್​ಗಳಿಗೆ ಈ ಬಲ್ಬುಗಳು ಹೊಂದುತ್ತಿಲ್ಲ. ಬೇಗನೆ ಹಾಳಾಗುತ್ತಿವೆ. ಈ ಕುರಿತು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಎಲ್ಲರೂ ಸೇರಿ ಹೆಸ್ಕಾಂಗೆ ಮನವರಿಕೆ ಮಾಡಲು ನಿರ್ಧರಿಸಿದ್ದೇವೆ. ಅನುದಾನದ ಕೊರತೆಯಿದ್ದು, ಬಂದ ತಕ್ಷಣವೇ ಹೊಸ ಬಲ್ಬುಗಳನ್ನು ಅಳವಡಿಸಲಾಗುವುದು. | ಪಂಪಾಪತಿ ನಾಯಕ್, ಪಪಂ ಮುಖ್ಯಾಧಿಕಾರಿ ಈಗ ಅಳವಡಿಸಿರುವ ವಿದ್ಯುತ್ ದೀಪಗಳ ತಂತಿಗಳು ಹಳೆಯದಾಗಿದ್ದರಿಂದ ಪದೇಪದೆ ದೀಪಗಳು ಹಾಳಾಗುತ್ತಿವೆ. ಅನುದಾನದ ಕೊರತೆಯಿದೆ. ಸಭೆಯಲ್ಲಿ ರ್ಚಚಿಸಲಾಗಿದ್ದು, ಹೊಸದಾಗಿ ತಂತಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಜಿ.ಬಿ. ಶಂಕರರಾವ್ ವೃತ್ತದಿಂದ ಚಿಕ್ಕೇರೂರ ಕ್ರಾಸವರೆಗೆ ನೂತನವಾಗಿ ತಂತಿಗಳನ್ನು ಅಳವಡಿಸಲಾಗುವುದು. | ಕಂಠಾಧರ ಅಂಗಡಿ, ಪಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net