

ಅಕ್ಕಿಆಲೂರ: ಪಟ್ಟಣದ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪ ಬಂದ್ ಆಗಿ ಒಂದೂವರೆ ವರ್ಷ ಕಳೆದರೂ ದುರಸ್ತಿ ಮಾಡಲು ಸ್ಥಳೀಯ ಗ್ರಾಪಂ ನಿರ್ಲಕ್ಷ್ಯವಹಿಸಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಜನನಿಬಿಡ ಪ್ರದೇಶವಾಗಿ, ವ್ಯಾಪಾರ ವಹಿವಾಟಿನಿಂದ ಜನಜಂಗುಳಿಯಿಂದ ಕೂಡಿರುವ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಅಧಿಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಿದೆ. ಶಿರಸಿ ಮತ್ತು ಹಾನಗಲ್ಲ ಭಾಗದಿಂದ ಜನತೆ ಪಟ್ಟಣಕ್ಕೆ ಪ್ರವೇಶ ಪಡೆಯುವ ಹಿನ್ನೆಲೆಯಲ್ಲಿ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲಾಗಿತ್ತು. 2019ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು 5 ಲಕ್ಷ ರೂಪಾಯಿ ವೆಚ್ವದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿತ್ತು. ಆರಂಭದಲ್ಲಿ ಬೆಳಕು ನೀಡಿದ್ದ ಹೈಮಾಸ್ಟ್ ದೀಪ ನಂತರ ತಾಂತ್ರಿಕ ಸಮಸ್ಯೆ ಎದುರಾಗಿ ಕಾರ್ಯ ಸ್ಥಗಿತಗೊಳಿಸಿದೆ.
ಸಂಪೂರ್ಣ ನಿಷ್ಕ್ರಿಯವಾಗಿರುವ ಕಂಬದಲ್ಲಿನ ಬೆಲೆ ಬಾಳುವ ಸಾಮಗ್ರಿಗಳಿಗೆ ಹಾನಿಯಾಗುವ ಸಂಭವ ಎದುರಾಗಿದೆ. ಹೈಮಾಸ್ಟ್ ವಿದ್ಯುತ್ ಕಂಬಕ್ಕೆ ಅಗತ್ಯವಿರುವ ಸಾಮಗ್ರಿ ಹಾಗೂ ವಿದ್ಯುತ್ ಪೂರೈಕೆ ಮಾಡಿ ಮತ್ತೆ ಬೆಳಗುವಂತೆ ಮಾಡಲು ಸ್ಥಳೀಯ ವ್ಯಾಪಾರಸ್ಥರು ಮನವಿ ಮಾಡಿದ್ದರು. ಆದರೆ, ಈತನಕ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಪಂ ಅಧಿಕಾರಿಗಳು, ಜನಪ್ರನಿಧಿಗಳು ಹೈಮಾಸ್ಟ್ ಕಂಬಕ್ಕೆ ಮರುಜೀವ ನೀಡಬೇಕೆಂದು ಸ್ಥಳೀಯ ನಿವಾಸಿ ಕೃಷ್ಣ ಸವಣೂರ, ಇತರರು ಆಗ್ರಹಿಸಿದ್ದಾರೆ.
ಅಕ್ಕಿಆಲೂರ ನಿತ್ಯ ಅಭಿವೃದ್ಧಿಗೊಳುತ್ತಿರುವ ಪಟ್ಟಣ. ಅಧಿಕ ಜನಸಂಖ್ಯೆ ವ್ಯವಹರಿಸುವ ಕತ್ತಲೆಯ ಪ್ರದೇಶ ಗುರುತಿಸಿ ಅನೇಕ ಹೈಮಾಸ್ಟ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಜತೆಗೆ ಸ್ಥಗಿತಗೊಂಡಿರುವ ಸಿಂಧೂರ ಸಿದ್ದಪ್ಪ ಹೈಮಾಸ್ಟ್ ಕಂಬಕ್ಕೆ ಮರುಜೀವ ನೀಡಲಾಗುವುದು. | ಮಕ್ಬಲ್ ಅಹ್ಮದ್ ರುಸ್ತೂಮಖಾನವರ, ಅಕ್ಕಿಆಲೂರ ಗ್ರಾಪಂ ಅಧ್ಯಕ್ಷ