ಭೋವಿ ಕಾಲೋನಿ ನಿವಾಸಿಗಳಿಗೆ ನನಸಾಗದ ಸ್ವಂತ ಸೂರಿನ ಕನಸು

25 BIRUR 01
Published on

ಬೀರೂರು: ಕೊಳಚೆ ನಿರ್ಮೂಲನಾ ಮಂಡಳಿಯಿಂದ ಗುರುತಿಸಿರುವ ಕೊಳಗೇರಿಗಳಲ್ಲಿ ನಿರ್ಮಿಸುತ್ತಿರುವ ಮನೆಗಳು ಎರಡು ವರ್ಷವಾದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಬೀರೂರು ಪಟ್ಟಣ ವ್ಯಾಪ್ತಿಯ ಜಲಗಿರಿಬಾವಿ ಬೀದಿ, ಭೋವಿ ಕಾಲೋನಿ, ಬಳ್ಳಾರಿ ಕ್ಯಾಂಪ್, ಅಂಬೇಡ್ಕರ್ ನಗರ, ಸರಸ್ವತಿಪುರಂ ಬಡಾವಣೆ, ಮರಾಠ ಕಾಲನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಒಟ್ಟು 300 ಮನೆಗಳ ನಿರ್ಮಾಣಕ್ಕೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅನುಮೋದನೆ ದೊರೆತ್ತಿದ್ದು, 2023 ಮಾರ್ಚ್ 26 ರಂದು ಅಂದಿನ ಶಾಸಕ ಬೆಳ್ಳಿ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದ್ದರು.

ಯೋಜನೆಗೆ ಅನುಸಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಆಯ್ಕೆಯಾದ ಲಾನುಭವಿಗಳು 63,280 ರೂ.ಗಳನ್ನು ಡಿಡಿ ರೂಪದಲ್ಲಿ ಮಂಡಳಿಗೆ ಪಾವತಿಸಿದ್ದು, 2,54,218 ರೂ.ಬ್ಯಾಂಕ್ ಸಾಲ ಸೇರಿ ಒಟ್ಟು 3,17,498 ರೂ. ಮತ್ತು ಇತರ ವರ್ಗದವರು 94,920 ರೂ.ಡಿಡಿ ರೂಪದಲ್ಲಿ ಮಂಡಳಿಗೆ ಪಾವತಿಸಿ 3,02,578 ರೂ.ಬ್ಯಾಂಕ್ ಸಾಲದೊಂದಿಗೆ ಒಟ್ಟು 6.67 ಲಕ್ಷ ರೂ.ವೆಚ್ಚದಲ್ಲಿ ಪ್ರತಿ ಕುಟುಂಬಕ್ಕೆ 330 ಚದರ ಅಡಿ ವಿಸ್ತೀರ್ಣವುಳ್ಳ ಅಡುಗೆ ಮನೆ, ಮಲಗುವ ಕೋಣೆ, ಹಾಲ್, ಶೌಚಗೃಹವನ್ನು ಹೊಂದಿರುವ ಮನೆಗಳನ್ನು ನಿರ್ಮಿಸಲಾಗುತ್ತದೆ.

ಆದರೆ ಡಿಡಿ ತೆಗೆದು ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆಯುತ್ತಾ ಬಂದರೂ 300 ಮನೆಗಳ ಪೈಕಿ 22 ಮನೆಗಳು ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಮನೆಗಳು ಆರ್‌ಸಿಸಿ ಹಂತಕ್ಕೆ ತಲುಪಿದರೆ ಇನ್ನೂ ಕೆಲವು ಮನೆಗಳು ತಳಪಾಯ ಹಾಗೂ ಪಿಲ್ಲರ್‌ಗಳನ್ನು ಮಾತ್ರ ಕಂಡಿದೆ. ಈ ಹೊಸ ಮನೆಗಳ ಆಸೆ ಹೊತ್ತ ಲಾನುಭವಿಗಳು ಇದ್ದ ಮನೆಗಳನ್ನು ಕೆಡವಿ ಅವರಿಗೆ ಮನೆ ನಿರ್ಮಿಸಿಕೊಡಲು ಅನುವು ಮಾಡಿಕೊಟ್ಟಿದ್ದರು. ಇದರಿಂದ ತಮ್ಮ ಸ್ವಂತ ಮನೆಯ ಕನಸು ನನಸಾಗದೆ ಬಾಡಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net