

ಸಿದ್ದಾಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ 975 ಜನತೆ ಎಂದು ಇತಿಹಾಸದಲ್ಲಿ ದಾಖಲಾಗಿದ್ದರೂ ಇಂದಿನವರೆಗೂ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ನಿರ್ವಣದ ಕನಸು ನನಸಾಗದೆ ಹಾಗೆಯೇ ಉಳಿದಿದೆ.
ಮಾವಿನಗುಂಡಿಯಲ್ಲಿರುವ ಮಹಿಳಾ ಸತ್ಯಾಗ್ರಹ ಸ್ಮಾರಕ ಇದ್ದೂ ಇಲ್ಲದಂತಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಸ್ವಾತಂತ್ರ್ಯ್ಕಾಗಿ ಹೋರಾಡಿದವರನ್ನು ನೆನಪಿಸುವ ಅರ್ಥಪೂರ್ಣ ಚಟುವಟಿಕೆ ನಡೆಯುವ, ಇಂದಿನ ಹಾಗೂ ಮುಂದಿನ ಜನತೆಗೆ ಸ್ವಾತಂತ್ರ್ಯ ಹೋರಾಟ ನೆನಪಿಸುವ ಸ್ಮಾರಕ ಭವನ ಆಗಬೇಕು ಎಂದು ಕಳೆದ ಹತ್ತನ್ನೆರಡು ವರ್ಷಗಳ ಹಿಂದೆಯೇ ಸ್ವಾತಂತ್ರ್ಯವನ ಕಟ್ಟಡಕ್ಕಾಗಿ ಗುದ್ದಲಿಪೂಜೆ ನಡೆದಿತ್ತು. ಆದರೆ, ಏಕೆ ಮುಂದುವರಿದಿಲ್ಲ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ಅಂದು ಗುದ್ದಲಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ನರಸಿಂಹ ಹೆಗಡೆ ಮಗೇಗಾರ ಹಾಗೂ ಬಂಗಾರಪ್ಪ ನಾಯ್ಕ ಮನಮನೆ ಅವರು ತಾವು ಸಾಯುವುದರೊಳಗಾದರೂ ಕಟ್ಟಡ ನಿರ್ವಿುಸಿ ಎಂದು ಹೇಳಿದ್ದರು. ಆದರೆ, ಸ್ವಾತಂತ್ರ್ಯವನ ನೋಡದೆ ಅವರು ಕೊನೆಯುಸಿರೆಳೆದರು. ಕಟ್ಟಡ ನಿರ್ಮಾಣ ಇಂದಿಗೂ ಕನಸಾಗಿಯೇ ಉಳಿದಿದೆ.
ಸಿದ್ದಾಪುರ ತಾಲೂಕಿನಲ್ಲಿ 767 ಪುರುಷರು ಹಾಗೂ 208 ಮಹಿಳೆಯರು ಒಟ್ಟೂ 975 ಜನರು ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡಿದ್ದಾರೆ. ಆದರೆ, ಅವರೆಲ್ಲರ ಹೋರಾಟದ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸ್ವಾತಂತ್ರ್ಯ ಸ್ಮಾರಕ ಭವನ ನಿರ್ವಿುಸುವುದಕ್ಕೆ ಆಡಳಿತಾರೂಢ ಸರ್ಕಾರಗಳು ಈ ಕುರಿತು ಯಾಕೆ ಮುಂದಾಗುತ್ತಿಲ್ಲ.
ಮಂತ್ರಿ ಮಹೋದಯರು ಸ್ವಾತಂತ್ರ್ಯ ಸ್ಮಾರಕ ಭವನ ನೀರ್ವಣ ಮಾಡಬೇಕೆಂದು ವೇದಿಕೆಯಲ್ಲಿ ಭಾಷಣ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತರಾದಂತೆ ಕಂಡುಬರುತ್ತಿದ್ದು ಇಚ್ಛಾಶಕ್ತಿಯಿದ್ದರೆ ಹೀಗಾಗುತ್ತಿತ್ತೇ? ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗುವುದು ಯಾವಾಗ? ಸ್ವಾತಂತ್ರ್ಯ ಸ್ಮಾರಕ ಭವನ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಯಾಕೆ ಇಚ್ಛಾಶಕ್ತಿ ತೋರುತ್ತಿಲ್ಲ.
ಜನಪ್ರತಿನಿನಿಧಿಗಳು ಏಕೆ ತಮ್ಮ ಬದ್ಧತೆ ತೋರುತ್ತಿಲ್ಲ ಎನ್ನುವ ಹಲವು ಪ್ರಶ್ನೆಗಳು ತಾಲೂಕಿನ ಜನತೆಯದ್ದಾಗಿದೆ.
2012-13ರಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಮಾವಿನಗುಂಡಿಯಲ್ಲಿ ಮಹಿಳಾ ಸತ್ಯಾಗ್ರಹ ಸ್ಮಾರಕ ನಿರ್ವಿುಸಿದೆ. ನಂತರದ ದಿನದಲ್ಲಿ ನಿರ್ವಹಣೆ ಇಲ್ಲದೆ ಸ್ಮಾರಕಗಳು ಶಿಥಿಲಗೊಂಡಿದೆ. ಮೂರ್ತಿಗಳು ಭಗ್ನಗೊಂಡಿದೆ.
ಜಗದ್ವಿಖ್ಯಾತ ಜೋಗ ಜಲಪಾತದ ಸಮೀಪವೇ ಮಾವಿಗುಂಡಿ ಇರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಮಹಿಳಾ ಸತ್ಯಾಗ್ರಹ ಸ್ಮಾರಕವನ್ನು ನೋಡಲು ಹೋದರೆ ಅವರಿಗೆ ದರ್ಶನವಾಗುವುದು ಶಿಥಿಲಗೊಂಡ ಮೂರ್ತಿಗಳು. ಹೀಗಿದ್ದರೂ ಸಂಬಂಧ ಪಟ್ಟ ಇಲಾಖೆ, ಜಿಲ್ಲಾಡಳಿತ ಯಾವುದೇ ಸೂಕ್ತ ಕ್ರಮಕೈಗೊಳ್ಳದೆ ಇರುವುದು ವಿಪರ್ಯಾಸವಾಗಿದೆ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ ಮಾಹಿತಿ ಇಂದಿನ ಹಾಗೂ ಮುಂದಿನ ಜನತೆಗೆ ತಿಳಿಸಬೇಕಾದದ್ದು ಅತ್ಯವಶ್ಯ. ಮುಖ್ಯವಾಗಿ ಮಾವಿನಗುಂಡಿಯಲ್ಲಿ ನಿರ್ವಿುಸಿರುವ ಮೂರ್ತಿಗಳು ನಿರ್ವಹಣೆ ಇಲ್ಲದೆ ಭಗ್ನಗೊಂಡಿದೆ. ಪ್ರವಾಸೋದ್ಯಮ ಸೇರಿದಂತೆ ಸಂಬಂಧಪಟ್ಟ ಇಲಾಖೆ ಎಚ್ಚರಗೊಂಡು ಇದ್ದ ಸ್ಮಾರಕವನ್ನು ಸುಸ್ಥಿಯಲ್ಲಿಟ್ಟು ಜನತೆಗೆ ಮಾಹಿತಿ ನೀಡುವ ಕೆಲಸ ಆಗಬೇಕು. | ಜಯಪ್ರಕಾಶ ಹೆಗಡೆ ಮಾವಿನಗುಂಡಿ, ಸ್ಥಳೀಯ ನಿವಾಸಿ