

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಬೇಕೆಂಬ ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕನಸು ಇನ್ನೂ ನನಸಾಗಿಲ್ಲ. ಯೋಜನೆಗೆ ಭೂಮಿ ನೀಡುವ ಪ್ರಕ್ರಿಯೆ ಪ್ರಸ್ತಾವನೆ ಹಂತದಲ್ಲೇ ಉಳಿದಿದೆ.
ರಾಜಧಾನಿ ಬೆಂಗಳೂರಿನ ಹೊರ ಭಾಗಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ರಾಜ್ಯದ ಎರಡನೇ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಲು 8 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ, ಮೈದಾನ ನಿರ್ಮಾಣಕ್ಕೆ ಸರ್ಕಾರದಿಂದ ಇನ್ನೂ ಭೂಮಿ ನೀಡಲು ಆಗಿಲ್ಲ.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸುವ ಮೂಲಕ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಪ್ರತಿಭಾನ್ವಿತ ಕ್ರಿಕೆಟ್ ಪ್ರತಿಭೆಗಳನ್ನು ಬೆಳಕಿಗೆ ತರುವುದು ಮತ್ತು ಪ್ರೋತ್ಸಾಹಿಸುವುದರ ಜತೆಗೆ, ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಗರದಲ್ಲಿ ಆಯೋಜಿಸುವ ಮೂಲಕ ಮೈಸೂರು ಭಾಗದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುವುದು ಕೆಎಸ್‌ಸಿಎಯ ಉದ್ದೇಶವಾಗಿದೆ.
ಸದ್ಯ ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇವರ ಅವಧಿಯಲ್ಲಾದರೂ ಭೂಮಿಯನ್ನು ಕೆಎಸ್‌ಸಿಎಗೆ ನೀಡುವ ಸಂಬಂಧ ಪ್ರಕ್ರಿಯೆ ಪೂರ್ಣಗೊಂಡರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಗರದಲ್ಲಿಯೇ ಕಣ್ತುಂಬಿಕೊಳ್ಳುವ ಸೌಭಾಗ್ಯ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ. ಹೀಗಾಗಿ, ಈ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳಬೇಕಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ಸಾತಗಳ್ಳಿ ಗ್ರಾಮ ವ್ಯಾಪ್ತಿಯ 19-20 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಪ್ರಾರಂಭದಲ್ಲಿ ಉದ್ದೇಶಿಸಲಾಗಿತ್ತು. ಇದರ ಅನುಸಾರ ಕೆಎಸ್‌ಸಿಎ ವತಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೂಮಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ, ಸದರಿ ಭೂಮಿಯನ್ನು ಒದಗಿಸಿಕೊಡುವಂತೆ ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲಿ ಕೆಎಸ್‌ಸಿಎ ಪದಾಧಿಕಾರಿಗಳು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಸರಾ ಮಹೋತ್ಸವ-2022ರಲ್ಲಿ ಭಾಗಿಯಾಗಿದ್ದ ಸಂದರ್ಭ ಮನವಿ ಸಲ್ಲಿಸಿದ್ದರು. ಮನವಿಯನ್ನು ಆಲಿಸಿದ್ದ ಬಸವರಾಜ ಬೊಮ್ಮಾಯಿ ಅವರು, ಈ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಗುವುದೆಂದು ಆಶ್ವಾಸನೆಯಿತ್ತಿದ್ದರು. ಆದರೆ, ಸದರಿ ವಿಷಯ ಕ್ಯಾಬಿನೆಟ್ ಹಂತಕ್ಕೆ ಹೋಗುವ ಮುನ್ನ ಚುನಾವಣೆ ಎದುರಾಯಿತು. ಜತೆಗೆ, ಸರ್ಕಾರವೂ ಬದಲಾಯಿತು.
ಈ ಮಧ್ಯೆ, ಸದರಿ ಜಾಗವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ನಗರ ಪಾಲಿಕೆಗೆ ಹಸ್ತಾಂತರಿಸಿದೆ. ಬಳಿಕ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಕೆಎಸ್‌ಸಿಎ ಸದಸ್ಯರು ಬೋಗಾದಿ ಸಮೀಪ ಕ್ರಿಕೆಟ್ ಮೈದಾನ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿದ್ದು, ಆ ಸ್ಥಳದಲ್ಲೇ 20 ಎಕರೆ ಜಾಗ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳು ಕಳೆದರೂ ಭೂಮಿ ನೀಡುವ ಪ್ರಕ್ರಿಯೆ ತಟಸ್ಥವಾಗಿಯೇ ಉಳಿದಿದ್ದು, ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.
ಜಮೀನು ಕೊಡಲು ಸರ್ಕಾರ ಒಪ್ಪಿಗೆ ನೀಡಿದ ಒಂದು ವಾರದೊಳಗೆ ಮೈದಾನ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲು ಕೆಎಸ್‌ಸಿಎ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 40 ರಿಂದ 50 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. 30 ರಿಂದ 40 ಸಾವಿರ ಪ್ರೇಕ್ಷಕರು ಕುಳಿತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಆಸನಗಳ ವ್ಯವಸ್ಥೆ, ವಿಶಾಲ ಕ್ರೀಡಾಂಗಣ, ತರಬೇತಿ ಮೈದಾನ ಸೇರಿದಂತೆ ಕ್ರೀಡಾಂಗಣಕ್ಕೆ ಬೇಕಾದ ಮೂಲ ಸೌಕರ್ಯಗಳೊಂದಿಗೆ ಯೋಜನೆ ಜಾರಿಗೊಳಿಸಲು ಕೆಎಸ್‌ಸಿಎ ಸಿದ್ಧಗೊಂಡಿದೆ.
ಕೆಎಸ್‌ಸಿಎ ನಗರದಲ್ಲಿ ಈಗಾಗಲೇ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನ ಹಾಗೂ ಜೆಸಿ ಕಾಲೇಜು ಆವರಣದ ಮೈದಾನಗಳನ್ನು ಅಭಿವೃದ್ಧಿಪಡಿಸಿದೆ. ಗ್ಲೇಡ್ಸ್ ಮೈದಾನದಲ್ಲಿ 2006ರಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿಗಳಿಗೆ ಆತಿಥ್ಯ ನೀಡಲಾಗುತ್ತಿದೆ. 2010ರಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ನಡುವಿನ ಫೈನಲ್ ರಣಜಿ ಸೇರಿದಂತೆ ಒಟ್ಟು 15 ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. 2013ರಲ್ಲಿ ಭಾರತ ‘ಎ’ ಮತ್ತು ವಿಂಡೀಸ್ ‘ಎ’ ತಂಡಗಳ ನಡುವಿನ ಪಂದ್ಯ ಹಾಗೂ 2014ರ ನವೆಂಬರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯಕ್ಕೂ ಸಾಕ್ಷಿಯಾಗಿ ಅಂತಾರಾಷ್ಟ್ರೀಯ ಮಾನ್ಯತೆ ಗಳಿಸಿದ್ದು ವಿಶೇಷವಾಗಿತ್ತು. ಇನ್ನು ಕೆಪಿಎಲ್ ಹಾಗೂ ಮಹಾರಾಜ ಟ್ರೋಫಿ ಪಂದ್ಯಾವಳಿಯ ಒಟ್ಟು 80ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಜೆಸಿ ಕಾಲೇಜು ಆವರಣದ ಮೈದಾನದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣದ ಕನಸು ನನಸಾಗಬೇಕಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವತಿಯಿಂದ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬೋಗಾದಿ ಸಮೀಪ ಭೂಮಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈದಾನಕ್ಕೆ ಭೂಮಿ ಕೊಡಿಸಲಿದ್ದಾರೆ ಎಂಬ ನಂಬಿಕೆ ಇದೆ.ಬಾಲಚಂದರ್ ಅಧ್ಯಕ್ಷರು, ಕೆಎಸ್‌ಸಿಎ, ಮೈಸೂರು ವಲಯ ನಮ್ಮ ಜಿಲ್ಲೆಯವರೇ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಕ್ರಿಕೆಟ್ ಅಭಿಮಾನಿಯಾಗಿದ್ದಾರೆ. ಆದ್ದರಿಂದ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಸಹಕಾರ ನೀಡುತ್ತಾರೆ ಎಂಬ ಭಾವನೆ ನನ್ನದು. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೈದಾನ ನಿರ್ಮಾಣವಾದರೆ ಇಲ್ಲಿನ ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತದೆ.ಚಿನ್ಮಯ್, ಕ್ರಿಕೆಟ್ ಪ್ರೇಮಿ