ಕಾರಿನಲ್ಲಿ ವ್ಯಕ್ತಿಯನ್ನು ಸುಟ್ಟು ಕೊಂದ ಪ್ರಕರಣದ ವಿಚಾರಣಾಧೀನ ಕೈದಿ ಆತ್ಮಹತ್ಯೆ

crime
Published on

ಉಡುಪಿ: ಹಿರಿಯಡ್ಕ ಸಬ್‌ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್(52) ಎಂಬಾತ ಭಾನುವಾರ ಮುಂಜಾನೆ ಜೈಲಿನ ಮುಖ್ಯದ್ವಾರದ ಕಂಬಿಗೆ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣು ಬಿಗಿದುಕೊಳ್ಳುವಾಗ ಸಹ ಕೈದಿಗಳು ಗಮನಿಸಿ, ಪಂಚೆಯನ್ನು ಕತ್ತರಿಸಿ ಜೀವ ಉಳಿಸಲು ಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಬೈಂದೂರು ತಾಲೂಕು ಒತ್ತಿನೆಣೆ ಸಮೀಪ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಕಾರ್ಕಳ ಮೂಲದ ಆನಂದ ದೇವಾಡಿಗ(62) ಎಂಬುವರನ್ನು ಸುಟ್ಟು ಕೊಂದ ಪ್ರಕರಣದಲ್ಲಿ ಸದಾನಂದ ಶೇರಿಗಾರ್ ಪ್ರಮುಖ ಆರೋಪಿಯಾಗಿದ್ದು, ಮಹಿಳೆ ಸೇರಿ ಇತರ ಮೂವರನ್ನು ಬಂಧಿಸಲಾಗಿತ್ತು. ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದಲ್ಲಿ ಅವ್ಯವಹಾರ ಎಸಗಿದ್ದು, ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಸಮನ್ಸ್ ಜಾರಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದ. ಈ ಪ್ರಕರಣವನ್ನು ಮುಚ್ಚಿಹಾಕಲು ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಬಿಂಬಿಸುವ ಸಲುವಾಗಿ ತನ್ನನ್ನೇ ಹೋಲುವ ಆನಂದ ದೇವಾಡಿಗನನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈದಿದ್ದನು.

ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದ್ದು, ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net