

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಕೇಸ್ ದಾಖಲಿಸಲಾಗುತ್ತಿದೆ. ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯದ ವಾತಾವರಣ ಹುಟ್ಟಿಸುವ ಪ್ರಯತ್ನ ನಡೆದಿದೆ. ಇದರಲ್ಲಿ ಶ್ರೀಕಾಂತ ಪೂಜಾರ ಬಂಧನ ಪ್ರಕರಣವೂ ಒಂದು. ಯಾವುದೇ ಪ್ರಕರಣ ಇಲ್ಲದೇ ಇದ್ದರೂ ಜೈಲಿಗೆ ಕಳಿಸಲಾಗಿದೆ. ಇದು ಎಮರ್ಜೆನ್ಸಿಯಲ್ಲಿ ಮಾತ್ರ ಸಾಧ್ಯ ಎಂದು ಆರೋಪಿಸಿದರು.
ಪೂಜಾರನನ್ನು ಜೈಲಿಗೆ ಹಾಕಿದ ಅಧಿಕಾರಿಗಳು, ಮಂತ್ರಿಗಳು ಕ್ಷಮೆ ಕೇಳಿಲಿಲ್ಲ. ಇದನ್ನು ಜನರು ಗಮನಿಸುತ್ತಿದ್ದಾರೆ. ಏಳೇ ತಿಂಗಳಲ್ಲಿ ಕಾಂಗ್ರೆಸ್‌ನವರಿಗೆ ಅಧಿಕಾರದ ಮದ ಏರಿದೆ. ಸರ್ಕಾರದ ದಾರ್ಷ್ಟೃ ಹೆಚ್ಚಾಗಿದೆ. ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ನಾಳೆ ಚಿಂತನ-ಮಂಥನ ಇದೆ. ಅಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್‌ಗೆ ರಾಮ ಮಂದಿರ ನಿರ್ಮಾಣ ಆಗಬಾರದು ಎನ್ನುವ ಆಸೆ ಇತ್ತು ಎಂದು ಜರಿದರು.
ಗೋದ್ರಾ ಬಗ್ಗೆ ಮಾತನಾಡುವ ಬಿ.ಕೆ. ಹರಿಪ್ರಸಾದ ಅವರ ಬಗ್ಗೆ ಮಾಹಿತಿ ಇದ್ದರೆ ಯಾಕೆ ಮಾಹಿತಿ ಕೊಡುತ್ತಿಲ್ಲ. ಇವರು ಮಾತನಾಡಿದ ಮೇಲೆ ಇಂಡಿಯಾ ಒಕ್ಕೂಟದ ನಾಲ್ಕೈದು ಜನರು ಮಾತನಾಡಿದರು. ಅಕಸ್ಮಾತ್ ಕರ್ನಾಟಕದಲ್ಲಿ ಏನಾದರೂ ಆದರೆ ಕಾಂಗ್ರೆಸ್ ಸರ್ಕಾರವೇ ಕಾರಣ. ಬಿಜೆಪಿ ಅಲ್ಲ, ನಿಜವಾದಿ ಕೋಮುವಾದಿ ಅಂದರೆ ಕಾಂಗ್ರೆಸ್ ಎಂದು ಕಿಡಿಯಾದರು.