ಲಕ್ಷ್ಮೇಶ್ವರದಲ್ಲಿ ತುಂಬಿ ಹರಿದ ಹಳ್ಳ, ಕೊಳ್ಳ

12 lxr 4- RAIN
Published on

ಲಕ್ಷ್ಮೇಶ್ವರ: ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆ ಜಲಾವೃತಗೊಂಡಿವೆ.


ಹತ್ತಿ, ಶೇಂಗಾ, ಮೆಣಸಿನಕಾಯಿ, ಈರುಳ್ಳಿ ಬೆಳೆಗಳು ಜಲಾವೃತಗೊಂಡಿವೆ. ಬಿತ್ತನೆಗೆ ಸಿದ್ಧಗೊಂಡ ಜಮೀನುಗಳಲ್ಲಿ ನೀರು ನಿಂತಿದೆ. ತಾಲೂಕಿನಲ್ಲಿ ಬಹುತೇಕ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಗಳು ಮತ್ತು ಹಳ್ಳಗಳು ತುಂಬಿ ಹರಿದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ, ಶಿಗ್ಲಿ, ರಾಮಗೇರಿ ಸೇರಿ ಹಲವು ಮನೆಗಳು ಕುಸಿದಿವೆ. ಶನಿವಾರ ಕೊಂಡಿಕೊಪ್ಪ ಗ್ರಾಮದಲ್ಲಿ ಮನೆ ಕುಸಿದು ಉಡಚವ್ವ ಬಾಣದ ಎಂಬ ಮಹಿಳೆ ಗಾಯಗೊಂಡಿದ್ದಾಳೆ.


ಹಿಂಗಾರಿನ ಮಳೆ ಒಂದೆಡೆ ಹರ್ಷ ತಂದಿದ್ದರೆ, ನಿರಂತರ ಮಳೆಯಿಂದ ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳ, ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಆದಾಗ್ಯೂ ಮಳೆ ಬಂದರೆ ಕೇಡಲ್ಲ ಎಂಬ ಮಾತಿನಂತೆ ಕಳೆದ ಎರಡು ವರ್ಷದಿಂದ ದೊಡ್ಡ ಪ್ರಮಾಣದ ಮಳೆಯಾಗದೆ ಕೆರೆ, ಹಳ್ಳ, ಬಾಂದಾರ, ಬದುವು ಸೇರಿ ಇತರ ಜಲಮೂಲಗಳಲ್ಲಿ ನೀರೇ ಇರಲಿಲ್ಲ. ಇದೀಗ ಜಲಮೂಲಗಳು ಭರ್ತಿಯಾಗಿರುವುದು ಹರ್ಷ ತಂದಿದೆ. ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರಿಗೆ ಮಳೆ ಬಿಡುವು ಕೊಡದ್ದರಿಂದ ಮತ್ತೆ ಜಮೀನು ಹದಗೊಳಿಸಿ ಬಿತ್ತನೆ ಮಾಡಲು ಕಾಲಮಿತಿ ಮೀರುವ ಆತಂಕವೂ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net