ಏಕಾಏಕಿ ಪೈಪ್ ಒಡೆದು ನೀರು ಪೋಲು

h2-Pipe 2
Published on

ಹುಬ್ಬಳ್ಳಿ: ನಗರದ ಅರ್ಧ ಭಾಗಕ್ಕೆ ನೀರು ಪೂರೈಸುವ ಅಂದಾಜು 40 ವರ್ಷ ಹಳೆಯ ಕೊಳವೆಮಾರ್ಗ ಏಕಾಏಕಿ ಒಡೆದಿದ್ದರಿಂದ ಅರ್ಧ ತಾಸಿಗೂ ಹೆಚ್ಚು ಸಮಯ ನೀರು ರಸ್ತೆ ಮೇಲೆ ಹರಿದ ಘಟನೆ ಸೋಮವಾರ ಸಂಜೆ ಇಲ್ಲಿನ ದೇಸಾಯಿ ಸರ್ಕಲ್ ಬ್ರಿಜ್ ಬಳಿ ನಡೆದಿದೆ.

375 ಎಂಎಂ ಡಯಾ ಸುತ್ತಳತೆಯ ಈ ಪೈಪ್ ನೀರಿನ ಒತ್ತಡ ಅಥವಾ ಸವೆತದಿಂದ ಒಡೆದಿರಬಹುದು ಎಂದು ಜಲಮಂಡಳಿ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕ್ಲಬ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್​ಗೂ ನೀರು ನುಗ್ಗಿತಲ್ಲದೆ, ಇಡಿ ರಸ್ತೆ ಉದ್ದಕ್ಕೂ ಹಳ್ಳದಂತೆ ನೀರು ಹರಿಯಿತು. ನೃಪತುಂಗ ಬೆಟ್ಟದ ಸಂಗ್ರಹಗಾರದಿಂದ ಈ ಪೈಪ್ ಮೂಲಕ ಪಾಲಿಕೆಯ ಜಲಸಂಗ್ರಹಗಾರದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಅಲ್ಲಿಂದ ತಬೀಬಲ್ಯಾಂಡ್, ಗಬ್ಬೂರ, ಸೆಟ್ಲಮೆಂಟ್, ಬಿಡ್ನಾಳ, ಗಣೇಶಪೇಟ, ಸಿಬಿಟಿ, ಕೊಪ್ಪಿಕರ ರಸ್ತೆ ಸೇರಿದಂತೆ ವಿವಿಧ ಪ್ರದೇಶಕ್ಕೆ ನೀರು ಪೂರೈಸಲಾಗುತ್ತದೆ.

ಪೈಪ್ ಒಡೆದ ಸುದ್ದಿ ತಿಳಿದು ದೇಸಾಯಿ ವೃತ್ತದ ಬ್ರಿಜ್​ಗೆ ಆಗಮಿಸಿದ ಜಲಮಂಡಳಿ ಅಧಿಕಾರಿಗಳು, ನೀರು ಹರಿಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಪೈಪ್ ದುರಸ್ತಿಗೆ ಕನಿಷ್ಠ 2 ದಿನಗಳ ಅವಶ್ಯಕತೆ ಇರುವುದರಿಂದ ಈ ಅವಧಿಯಲ್ಲಿ ಬ್ರಿಜ್ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ನೀರು ಪೂರೈಕೆ ಯೋಜನೆಯಡಿ ಬರುವ ಜನೆವರಿಯಲ್ಲಿ ಈ ಪೈಪ್​ಅನ್ನು ಎಲ್ ಆಂಡ್ ಟಿ ಕಂಪನಿಯವರು ಬದಲಾಯಿಸುವವರಿದ್ದಾರೆ. ಅದುವರೆಗೆ ಹಳೆಯ ಪೈಪ್​ಅನ್ನೇ ಜಲಮಂಡಳಿ ಅಧಿಕಾರಿಗಳು ದುರಸ್ತಿಗೊಳಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net