ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಣೆ

mng_21 may male
Published on

ಮಂಗಳೂರು: ಕರಾವಳಿಯಲ್ಲಿ ಬುಧವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಬಹುತೇಕ ದಿನಪೂರ್ತಿ ಬಿಸಿಲು ಮಿಶ್ರಿತ ಮೋಡ ಕವಿದ ವಾತಾವರಣವಿತ್ತು. ಭಾರತೀಯ ಹವಾಮಾನ ಇಲಾಖೆ ಜು.25ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.

ದ.ಕ.ದಲ್ಲಿ ಕಳೆದ 3-4 ವಾರದಿಂದ ಉತ್ತಮವಾಗಿ ಸುರಿದಿದ್ದ ಮಳೆ ಬುಧವಾರ ತುಸು ವಿರಾಮ ಪಡೆದುಕೊಂಡಿದೆ. ಬುಧವಾರ ಮಧ್ಯಾಹ್ನ ವರೆಗೆ ಬಿಸಿಲು ಸಹಿತ ಮೋಡ ಕಂಡುಬಂದರೆ, ಮಧ್ಯಾಹ್ನ ನಂತರ ಎಲ್ಲೆಡೆ ಹನಿಮಳೆಯ ವಾತಾವರಣ. ಸಂಜೆಯಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಡಿ, ಶಿರಾಡಿ, ಆಗುಂಬೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಈಗಿನಂತೆ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಜುಲೈ 30ರ ತನಕವೂ ಮಳೆ ಮುಂದುವರಿಯುವ ಲಕ್ಷಣಗಳಿವೆ. ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿದ್ದು, ಕರಾವಳಿ ಜಿಲ್ಲೆಗಳಾದ ಕಾಸರಗೋಡು, ದ.ಕ, ಉಡುಪಿ ಭಾಗಗಳಲ್ಲಿ 2 ದಿನಗಳ ಕಾಲ ಸಾಮಾನ್ಯ ಮಳೆಯ ಮುಂದುವರಿಯುವ ಸಾಧ್ಯತೆ ಇದೆ.

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.3 ಮೀಟರ್ ಹಾಗೂ ಬಂಟ್ವಾಳ ನೇತ್ರಾವತಿ ನದಿ ಮಟ್ಟ 8.5 ಮೀಟರ್‌ಗಳಲ್ಲಿ ಹರಿಯುತ್ತಿತ್ತು. ಕರಾವಳಿಯಲ್ಲಿ ಗಂಟೆಗೆ 38ಕಿ.ಮೀ ನಿಂದ 48 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಕಳೆದ 24 ಗಂಟೆಗಳ ಕಾಲಾವಧಿಯಲ್ಲಿ ದ.ಕ ಜಿಲ್ಲೆಯಲ್ಲಿ ಮಳೆಯಿಂದಾಗಿ ಆಸ್ತಿಪಾಸ್ತಿ, ಪ್ರಾಣಾ ಹಾನಿ ಸಂಭವಿಸಿಲ್ಲ.

*ಬೆಳ್ತಂಗಡಿಯಲ್ಲಿ ಗರಿಷ್ಟ ಮಳೆ ದಾಖಲು

ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿ 44 ಮಿ.ಮೀ ಗರಿಷ್ಠ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಟ ತಾಪಮಾನ 29.7 ಡಿಗ್ರಿ ಸೆಲ್ಸಿಯೆಸ್, ಕನಿಷ್ಟ 23.1 ಡಿಗ್ರಿ ಸೆಲ್ಸಿಯೆಸ್ ದಾಖಲಾಗಿದೆ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 37.4 ಮಿ.ಮೀ.ದಾಖಲಾಗಿದೆ. ಪುತ್ತೂರಲ್ಲಿ ಗರಿಷ್ಠ 43.8 ಮಿ.ಮೀ, ಬಂಟ್ವಾಳ 38.2 ಮಿ.ಮೀ, ಮಂಗಳೂರು 32.1 ಮಿ.ಮೀ, ಸುಳ್ಯ 27.8 ಮಿ.ಮೀ, ಮೂಡುಬಿದಿರೆ 41.3 ಮಿ.ಮೀ, ಕಡಬ 34.8 ಮಿ.ಮೀ, ಮೂಲ್ಕಿ 32.1 ಮಿ.ಮೀ, ಉಳ್ಳಾಲ 35.4 ಮಿ.ಮೀ. ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net