

ಮೈಸೂರು: ಅಭಿವ್ಯಕ್ತಿಗೆ ರಂಗಭೂಮಿ ಸೂಕ್ತ ವೇದಿಕೆ ಎಂದು ರಂಗಕರ್ಮಿ ಎಚ್.ಜನಾರ್ದನ್(ಜನ್ನಿ) ಅಭಿಪ್ರಾಯಪಟ್ಟರು.
ರಂಗಾಯಣ, ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ, ಗುಬ್ಬಿ ವೀರಣ್ಣ ಪೀಠದ ಸಹಯೋಗದಲ್ಲಿ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ‘ರಂಗಸಂಯುಕ್ತ’ ರಂಗಭೂಮಿ ಮತ್ತು ಅದರ ಪೂರಕ ಕಲೆಗಳ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ‘ಅಭಿವ್ಯಕ್ತಿ’ ಕುರಿತು ಮಾತನಾಡಿದರು.
ರಂಗಭೂಮಿಯಲ್ಲಿ ಅಭಿವ್ಯಕ್ತಿಗೆ ಎಲ್ಲ ರೀತಿ ಅವಕಾಶಗಳು ಇವೆ. ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಕಲೆಗೆ ನ್ಯಾಯ ಕಲ್ಪಿಸಬೇಕು ಎಂದು ರಂಗ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿವಿಧ ಕಲಾಪ್ರಕಾರಗಳಿಗೆ ಮಿತಿಗಳಿವೆ. ಆದರೆ ರಂಗಭೂಮಿಗೆ ಆ ರೀತಿ ಯಾವುದೇ ಮಿತಿಗಳು ಇಲ್ಲ. ಇದು ಗಡಿಮೀರಿದ ಕಲೆ. ನಾಟಕ ರಂಗವೇ ಒಂದು ಬಯಲು ರಂಗಮಂದಿರ. ಅಲ್ಲಿ ಎಲ್ಲೆಂದರಲ್ಲಿ ಪ್ರಯಾಣ ಮಾಡಬಹುದು. ಆದರೆ ನಟನಾ ನಡೆಯಲ್ಲಿ ಎಚ್ಚರ ಇರಬೇಕು ಎಂದು ಸಲಹೆ ನೀಡಿದರು.
ರಂಗಕಲೆಯಲ್ಲಿ ಎಲ್ಲರೊಳಗೆ ಒಬ್ಬ. ಇಲ್ಲಿ ನಾನು ಇಲ್ಲ. ನಾವು ಅಷ್ಟೇ. ನಾನು ಎಂಬುದು ವಿಷ. ಸೈದ್ಧಾಂತಿಕ, ತಾತ್ವಿಕವಾಗಿಯೂ ನಾನತ್ವವಲ್ಲ. ಎಲ್ಲರನ್ನು ಒಳಗೊಳ್ಳುವುದು. ಈ ತತ್ವದಡಿಯೇ ಕಲಾವಿದರಾಗಿ ಬೆಳಕಾಗಬೇಕು. ಸಮಾಜವನ್ನೂ ಬೆಳಗಬೇಕು. ಇಲ್ಲಿ ಮುಗ್ಧತೆ ಮತ್ತು ಮುಕ್ತತೆ ಮುಖ್ಯ ಎಂದರು.
ಅಭಿವ್ಯಕ್ತಿ ಸಂವಿಧಾನಿಕ ಹಕ್ಕು. ಆದರೆ ದೇಶದ ಬಹುಸಂಖ್ಯಾತರಿಗೆ ಈ ಹಕ್ಕಿನ ಕುರಿತು ಅರಿವು ಇಲ್ಲ. ಅದನ್ನು ಚಲಾವಣೆ ಸಹ ಮಾಡುತ್ತಿಲ್ಲ. ಹೀಗಾಗಿಯೇ ಇನ್ನು ಮೌಢ್ಯ, ದೌರ್ಜನ್ಯ, ಅನ್ಯಾಯ, ಶೋಷಣೆಗೆ ಒಳಗಾಗಿದ್ದಾರೆ. ಸಮಾಜದಲ್ಲಿ ಇಂದಿಗೂ ಅಸ್ಪಶ್ಯತೆ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.