

ಹುಬ್ಬಳ್ಳಿ: ಇಲ್ಲಿನ ಪ್ರಸಿದ್ಧ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಷಯ ಹೊಸ ಮಜಲು ಪಡೆದುಕೊಂಡಿದೆ. ಬಾಲೇಹೊಸೂರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಭಾನುವಾರ ತುರ್ತು ಸುದ್ದಿಗೋಷ್ಠಿ ನಡೆಸಿ, ಗಣ್ಯರ ಸಮ್ಮುಖದಲ್ಲಿ ಸತ್ಯ ಬಹಿರಂಗಪಡಿಸುವಂತೆ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಗಣ್ಯರಿಗೆ ಸವಾಲು ಹಾಕಿದರು.
‘ಉತ್ತರಾಧಿಕಾರಿ ವಿಚಾರಕ್ಕೆ ಸಂಬಂಧಿಸಿ ನನ್ನ ವಿಷಯದಲ್ಲಿ ಏನೇನು ಆಗಿತ್ತು, ನಾನು ಉತ್ತರಾಧಿಕಾರಿ ಮಾಡುವಂತೆ ಕೇಳಿದ್ದೆನೇ ಅಥವಾ ಗಣ್ಯರು ಒತ್ತಾಯಿಸಿದ್ದಕ್ಕಾಗಿ ಒಪ್ಪಿದ್ದೆನೆಯೇ? ಈಗೇಕೆ ನಿರಾಕರಿಸಲಾಗುತ್ತಿದೆ? ಎನ್ನುವುದನ್ನು ಬಹಿರಂಗಪಡಿಸಿ. ಫೆ.23ರಂದು ಮೂರುಸಾವಿರ ಮಠಕ್ಕೆ ಬರುತ್ತೇನೆ. ಸಂಬಂಧಿಸಿದ ಎಲ್ಲ ಗಣ್ಯರೂ ಬರಬೇಕು. ಶ್ರೀ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆ ಎದುರು ಪ್ರಮಾಣ ಮಾಡಿ, ಆತ್ಮಸಾಕ್ಷಿಯಂತೆ ಎಲ್ಲವನ್ನೂ ಹೇಳಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (ಮೂಜಗು) ಶನಿವಾರ ಪತ್ರಿಕಾ ಹೇಳಿಕೆ ನೀಡಿ, ಸದ್ಯ ಮಠದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿಲ್ಲ. ಭಕ್ತರು ಗೊಂದಲಕ್ಕೀಡಾಗಬಾರದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದ ದಿಂಗಾಲೇಶ್ವರ ಸ್ವಾಮೀಜಿ, ಪತ್ರಿಕಾ ಹೇಳಿಕೆಯಲ್ಲಿನ ಪದಗಳನ್ನು ನೋಡಿದಾಗ ಅದು ಮೂಜಗು ಹೇಳಿಕೆಯಂತೆ ಕಾಣುತ್ತಿಲ್ಲ ಅಥವಾ ಬೇರೆ ಯಾರೋ ಅವರ ಮೇಲೆ ಒತ್ತಡ ಹಾಕಿ ಹೇಳಿಕೆ ಕೊಡಿಸಿರುವಂತೆ ಕಂಡುಬರುತ್ತಿದೆ. ಇವೆಲ್ಲವೂ ಭಕ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಸತ್ಯ ಏನು ಎನ್ನುವುದು ಸಮಾಜಕ್ಕೆ ಗೊತ್ತಾಗಬೇಕಿದೆ ಎಂದರು.
ಉತ್ತರಾಧಿಕಾರಿ ವಿಷಯದಲ್ಲಿ ಮೂಜಗು ಹಾಗೂ ಗಣ್ಯರಾದ ಬಸವರಾಜ ಹೊರಟ್ಟಿ, ಜಗದೀಶ ಶೆಟ್ಟರ್, ಡಾ. ವಿಜಯ ಸಂಕೇಶ್ವರ, ಸಿ.ಎಂ. ಉದಾಸಿ, ವೀರಣ್ಣ ಮತ್ತಿಕಟ್ಟಿ, ಶಂಕರಣ್ಣ ಮುನವಳ್ಳಿ, ಮೋಹನ ಲಿಂಬಿಕಾಯಿ ಸೇರಿ 52 ಗಣ್ಯರು ನಿರ್ಧಾರ ಮಾಡಿದ್ದರು. ಅದು ಏನೆಂದು ಅವರೇ ಬಹಿರಂಗಪಡಿಸಬೇಕೆಂಬುದು ನನ್ನ ಕೋರಿಕೆ ಎಂದರು.
ವಿವಾದಕ್ಕೆ ಯಾರು ಕಾರಣ ಎನ್ನುವುದು ಜನರಿಗೆ ಗೊತ್ತಾಗಲಿ. ಉತ್ತರಾಧಿಕಾರಿ ಹುದ್ದೆಗಾಗಿ ನಾನು ಕೋರ್ಟ್ ಕಟ್ಟೆ ಹತ್ತಿಲ್ಲ. ನನ್ನ ಪರವಾಗಿ ನ್ಯಾಯಾಲಯಕ್ಕೆ ಹೋಗಿದ್ದು, ನೇಮಕವನ್ನು ಎತ್ತಿ ಹಿಡಿಯಲಾಗಿದೆ. ಆದ್ದರಿಂದ ಶಾಂತಿಯುತ ವಾತಾವರಣದಲ್ಲಿ ನಾಡಿಗೆ ಸತ್ಯ ತಿಳಿಸಿ ಎನ್ನುವುದಷ್ಟೇ ನನ್ನ ಆಗ್ರಹ ಎಂದು ಸ್ಪಷ್ಟಪಡಿಸಿದರು.
52 ಜನ ಗಣ್ಯರಲ್ಲದೆ, ಸಚಿವ ಬಸವರಾಜ ಬೊಮ್ಮಾಯಿ, ಹಿರಿಯ ನ್ಯಾಯವಾದಿ ಜಿ.ಆರ್. ಅಂದಾನಿಮಠ ಅವರೂ ಫೆ.23ರಂದು ಮಠಕ್ಕೆ ಆಗಮಿಸಬೇಕು. ಸಭೆ ಶಾಂತಿಯುತವಾಗಿ ನಡೆಯಲು ಪೊಲೀಸರು-ಸರ್ಕಾರ ಅಗತ್ಯ ಏರ್ಪಾಟು ಮಾಡಲಿ. ನನ್ನನ್ನು ಉತ್ತರಾಧಿಕಾರಿ ಮಾಡುವಾಗ ಕೆಲ ಕಾವಿಧಾರಿಗಳು ಪಾತ್ರ ವಹಿಸಿದ್ದರು. ಅವರೂ ಬರಲಿ ಎಂದು ಹೇಳಿದರು.
ನನ್ನ ಮೇಲೆ ಹಲವು ಆರೋಪ ಮಾಡಲಾಯಿತು. ತೇಜೋವಧೆಗೆ ಯತ್ನಿಸಲಾಯಿತು. ಅದನ್ನೆಲ್ಲ ಸಹಿಸಿಕೊಂಡಿದ್ದೇನೆ. ತಾನೇ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವವರು, ಕದ್ದು ಮುಚ್ಚಿ ಏನೇನೊ ಮಾಡುವವರೂ ಸಭೆಗೆ ಬರಲಿ ಎನ್ನುವುದು ನನ್ನ ಸವಾಲು ಎಂದರು.
ಉತ್ತರಾಧಿಕಾರಿ ಹುದ್ದೆಗೆ ಸಂಬಂಧಿಸಿ 14 ವರ್ಷದಿಂದ ನಾನು ಬಾಯಿ ಬಿಟ್ಟಿರಲಿಲ್ಲ. ಮೂಜಗು, ಸಮಾಜದ ಹಿರಿಯರನ್ನು ಸಂರ್ಪಸಿ ನಿರ್ವಿಘ್ನವಾಗಿ ಬಗೆಹರಿಸುವಂತೆ ಈವರೆಗೆ ಅನೇಕ ಸಲ ಕೇಳಿಕೊಂಡಿದ್ದೇನೆ. ಮಠದಲ್ಲೇ ಕಲಿತ ನನ್ನ ಮೇಲೆ ಅಲ್ಲಿಯ ಅನ್ನದ ಋಣ ಇದೆ. ಹಿಂದಿನ ಜಗದ್ಗುರುಗಳು 26 ವರ್ಷದ ಹಿಂದೆ ನನ್ನನ್ನು ಬಾಲೇಹೊಸೂರು ಮಠಕ್ಕೆ ನೇಮಿಸಿದರು. ನನ್ನ ಪಾಡಿಗೆ ನಾನು ಅಲ್ಲಿದ್ದೆ. 2009ರ ಆಗಸ್ಟ್ ನಲ್ಲಿ ಮೂಜಗು, ಗಣ್ಯರು ಕೇಳಿದಾಗ ಉತ್ತರಾಧಿಕಾರಿಯಾಗಲು ನಿರಾಕರಿಸಿದ್ದೆ. ಮುಂದೆ ಅವರೆಲ್ಲರೂ ಒತ್ತಾಯಿಸಿ, ನಾನು ‘ಒಲ್ಲೆ’ ಎಂದು ಹೇಳಲಾಗದಂಥ ಪರಿಸ್ಥಿತಿ ತಂದಿಟ್ಟಾಗ ಒಪ್ಪಿದ್ದೆ ಎಂದು ವಿವರಿಸಿದರು.
ಮೂಜಗು ಅದೇ ಹುದ್ದೆಯಲ್ಲಿ ಇರಬೇಕು. ವಿವಾದವನ್ನು ಅವರು, ಹಿರಿಯರು ಅಂತರಂಗ ಅಥವಾ ಬಹಿರಂಗವಾಗಿ ಬಗೆಹರಿಸಬೇಕು. ನಾನು ವಿವಾದಕ್ಕೆ ಮೀಸಲಿರುವ ವ್ಯಕ್ತಿಯಲ್ಲ. ಇಲ್ಲಿ ಮಠದ ಪ್ರಶ್ನೆ ಒಂದೆಡೆ ಇದ್ದರೆ, ನನ್ನ ಮರ್ಯಾದೆ ಪ್ರಶ್ನೆ ಮತ್ತೊಂದೆಡೆ ಇದೆ. ಮರ್ಯಾದಸ್ಥ ಎನ್ನುವುದು ಸಾಬೀತಾದರೆ ನೂರು ಮಠ ಕಟ್ಟಬಹುದು. 14 ವರ್ಷದ ಹಿಂದೆ ವಿವಾದ ಒಳಗೇ ಇತ್ತು. 11 ವರ್ಷದಿಂದ ಬಹಿರಂಗಕ್ಕೆ ಬಂದಿದೆ ಎಂದರು.
ಹಿಂದೆ ಮೂರುಸಾವಿರ ಮಠದ ವಿವಾದ ಬಗೆಹರಿಸುವಲ್ಲಿ ಪಾತ್ರ ವಹಿಸಿದ್ದು ನಿಜ. ಆಗ ಹಣಕಾಸಿನ ವ್ಯವಹಾರ ನಡೆದಿದ್ದು ಏನಿದ್ದರೂ ವಿವಾದ ಬಗೆಹರಿಸುವ ಸಂಬಂಧ ಮಾತ್ರ. ಮಠ ಸಂಕಷ್ಟದಲ್ಲಿದ್ದಾಗ ವಿವಾದ ಪರಿಹಾರಕ್ಕೆ ಗುರುಗಳು ಕರೆದಿದ್ದರಿಂದ ಮಾತ್ರ ಬಂದಿದ್ದೆನೆಯೇ ಹೊರತು ಉತ್ತರಾಧಿಕಾರದ ಮೇಲಿನ ಆಸೆಯಿಂದ ಬಂದಿರಲಿಲ್ಲ ಎಂದರು.
ಮೂಜಗು ಅವರನ್ನು ಸಂರ್ಪಸಲು ಯತ್ನಿಸುತ್ತಿದ್ದೇನೆ. ಅವರು ನನ್ನ ಗುರುಗಳು. ಎಲ್ಲರನ್ನೂ ಈ ಹಿಂದೆ ಹಲವು ಸಲ ಸಂರ್ಪಸಿದ್ದೇನೆ. ಈಗ ವೈಯಕ್ತಿಕವಾಗಿ ಸಂರ್ಪಸಿಲ್ಲ. ಮಾಧ್ಯಮಗಳ ಮೂಲಕ ಆಹ್ವಾನಿಸುತ್ತಿದ್ದೇನೆ ಎಂದರು.
23ರಂದು ಎಲ್ಲವನ್ನೂ ತಿಳಿಸುವೆ
ನನ್ನನ್ನು ಉತ್ತರಾಧಿಕಾರಿ ಎಂದು ನೇಮಿಸಿದ ದಾಖಲೆಗೆ 52 ಗಣ್ಯರು ಸಹಿ ಹಾಕಿದ್ದರ ಪ್ರತಿ ನನ್ನ ಬಳಿ ಇದೆ. ಫೆ. 23ರಂದು ಸಭೆಗೆ ಬರುವಾಗ ತರುತ್ತೇನೆ. ಇನ್ನೂ ಕೆಲ ವಿಚಾರ ಹೇಳುತ್ತೇನೆ. ನನ್ನ ಮೇಲಿನ ಎಲ್ಲ ಆರೋಪ ನಿರಾಧಾರ ಎಂದು ಮಠದ ಭಕ್ತರು ಹಾಗೂ ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.