ದಯಾಮರಣಕ್ಕೆ ನೀಡುವಂತೆ ಮನವಿ ಮಾಡಿದ ವೃದ್ಧೆ

24-GPT-2A
ಗುಂಡ್ಲುಪೇಟೆ ತಾಲೂಕಿನ ಹುಲ್ಲೇಪುರ ಗ್ರಾಮದ ಮಹದೇವಮ್ಮ ತಾಲೂಕು ಕಚೇರಿ ಎದುರು ಕಾದುಕುಳಿತಿದ್ದಾರೆ.
Published on

ಗುಂಡ್ಲುಪೇಟೆ : ನನಗೆ ನ್ಯಾಯಕೊಡಿ, ಇಲ್ಲವೇ ದಯಾ ಮರಣ ಕರುಣಿಸಿ ಎಂದು ವೃದ್ಧೆಯೊಬ್ಬರು ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.

ತಾಲೂಕಿನ ಹುಲ್ಲೇಪುರ ಗ್ರಾಮದ ಮಹದೇವಮ್ಮ (65) ಅವರ ಸಂಬಂಧಿಕರು ಪಿತ್ರಾರ್ಜಿತ ಆಸ್ತಿಯನ್ನು ಅಕ್ರಮವಾಗಿ ಪರಬಾರೆ ಮಾಡಿಕೊಂಡಿರುವ ಬಗ್ಗೆ ಕಳೆದ 4 ತಿಂಗಳಿನಿಂದ ಕಚೇರಿಗಳಿಗೆ ಅಲೆದು ಸುಸ್ತಾಗಿ ದಯಾಮರಣಕ್ಕೆ ಮನವಿ ಮಾಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ಇವರ ಪತಿ ರಂಗಶೆಟ್ಟಿ ನಿಧನರಾದರು. ಮಕ್ಕಳಿಲ್ಲದ ಇವರಿಗೆ 30 ಎಕರೆಗೂ ಅಧಿಕ ಪಿತ್ರಾರ್ಜಿತ ಆಸ್ತಿಯಿದೆ. ಇದರಲ್ಲಿ 3.16 ಎಕರೆಯ ಜಮೀನನ್ನು ಮಹದೇವಮ್ಮನ ಗಮನಕ್ಕೆ ತಾರದೆ ನಕಲಿ ವಂಶವೃಕ್ಷ ಸೃಷ್ಟಿಸಿದ ದಾಯಾದಿಗಳು ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಈ ವಿಚಾರ ತಿಳಿದ ಮಹದೇವಮ್ಮ ಹಂಗಳದ ನಾಡಕಚೇರಿ, ಪಟ್ಟಣದ ತಾಲೂಕು ಕಚೇರಿ ಸೇರಿದಂತೆ ದಿನನಿತ್ಯ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಬರಿಗಾಲಿನಲ್ಲಿ ಉರಿಬಿಸಿಲಿನಲ್ಲಿ ಎಡತಾಕುವ ವೃದ್ಧೆಗೆ ಸೂಕ್ತ ಮಾರ್ಗದರ್ಶನ ನೀಡಿ ನ್ಯಾಯ ದೊರಕಿಸಲು ಯಾವುದೇ ಅಧಿಕಾರಿ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹದೇವಮ್ಮ ಬುಧವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮಂಜುನಾಥ್ ಅವರ ಬಳಿ ತಮ್ಮ ಕಷ್ಟವನ್ನು ಪರಿಪರಿಯಾಗಿ ಹೇಳಿಕೊಂಡು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಮತದಾನ ಮಾಡುವುದಿಲ್ಲ. ನನಗೆ ದಯಮರಣ ಕೊಡಿ, ಇಲ್ಲವೇ ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿಕೊಂಡಿರುವ ದಾಯಾದಿಗಳ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಕಲ್ಪಿಸಿ ಕೊಡಿ ಎಂದು ಮನವಿಪತ್ರ ನೀಡಿದರು.

ಆಸ್ತಿ ಕಬಳಕೆ ಮಾಡಿಕೊಂಡಿರುವ ದಾಯಾದಿಗಳು ಮತ್ತು ಹಂಗಳ ನಾಡಕಚೇರಿಯ ರೆವಿನ್ಯೂ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ, ನಿಮಗೆ ಖಂಡಿತ ನ್ಯಾಯ ಕಲ್ಪಿಸಿಕೊಡುತ್ತೇವೆ ಎಂದು ಮಂಜುನಾಥ್ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net