ಹಿಂದೆಯೂ ಅಮಾನತಾಗಿದ್ದ ಅಧಿಕಾರಿ ಶಾಮೀಲು?

Illigale Timber transport Accuced arrested
ಜೂನ್ 9ರಂದು ಮುಂಡಗೋಡ ಕಟ್ಟಿಗೆ ಡೀಪೋದಿಂದ ಅಕ್ರಮವಾಗಿ ಶಿರಸಿಗೆ ಕಟ್ಟಿಗೆ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆಯ ಅಧಿಕಾರಿಗಳು.
Published on

ಮುಂಡಗೋಡ: ಇಲ್ಲಿನ ಟಿಂಬರ್ ಡಿಪೋದಿಂದ ಅಕ್ರಮವಾಗಿ ಸಾಗವಾನಿ ನಾಟಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಡಿ.ಎಫ್‌ಒ ಪ್ರಶಾಂತ ಕೆ. ಅವರ ನೇತೃತ್ವದಲ್ಲಿ ಸಿದ್ದಾಪುರ ಎಸಿಎಫ್ ಡಿ.ರಘು ಹಾಗೂ ಭಟ್ಕಳ ಎಸಿಎಫ್ ಅವರ ತಂಡ ತನಿಖೆ ಚುರುಕುಗೊಳಿಸಿದೆ.

ಹಿನ್ನೆಲೆ: ಪಟ್ಟಣದ ಟಿಂಬರ್ ಡಿಪೋದಿಂದ ಜೂನ್ 9ರಂದು ಎರಡು ಲಾರಿಗಳಲ್ಲಿ ವಿವಿಧ ಜಾತಿ ಕಟ್ಟಿಗೆ ಜತೆ ಅಕ್ರಮವಾಗಿ 22 ಸಾಗವಾನಿ ನಾಟಾಗಳು ಸಾಗಾಟಮಾಡಲಾಗುತ್ತಿತ್ತು.

ಇದನ್ನು ಶಿರಸಿ ತಾಲೂಕಿನ ಎಕ್ಕಂಬಿ ಚೆಕ್ ಪೋಸ್ಟ್ ತನಿಖಾ ಠಾಣೆಯಲ್ಲಿ ಇಲಾಖೆ ಸಿಬ್ಬಂದಿ ಪತ್ತೆಹಚ್ಚಿದ್ದರು.

ಹಳೆ ಚಾಳಿ ಮುಂದುವರಿಸಿದ ಉಪವಲಯ ಅರಣ್ಯಧಿಕಾರಿ: 2012-13ರಲ್ಲಿ ಗುಂಜಾವತಿ ಅರಣ್ಯ ಪ್ರದೇಶದಲ್ಲಿ ಮೂರು ಬೃಹತ್ ಸಾಗವಾನಿ ಮರಗಳನ್ನು ಕಡಿದು ಸಾಗಿಸಲಾಗಿತ್ತು.

ಈ ಮರದ ಬುಡಗಳನ್ನು ಜೆಸಿಬಿಯಲ್ಲಿ ಕೀಳಿಸಿ ಸಾಕ್ಷೃನಾಶಕ್ಕೆ ಯತ್ನಿಸಿದ ಪ್ರಕರಣದಲ್ಲಿ ಉಪವಲಯ ಅರಣ್ಯಧಿಕಾರಿ ಹನಮಂತ ಬಡ್ಡಿವಡ್ಡರನನ್ನು ಅಮಾನತುಗೊಳಿಸಲಾಗಿತ್ತು.

ನಂತರ ಇವರು ಟಿಂಬರ ಡಿಪೋಗೆ ವರ್ಗಾವಣೆಯಾಗಿ ಬಂದಿದ್ದರು. ಈಗ ಈ ಪ್ರಕರಣದಲ್ಲೂ ಇದೇ ವ್ಯಕ್ತಿ ಭಾಗಿಯಾಗಿರುವುದು ಹಳೇ ಚಾಳಿಯನ್ನು ಮುಂದುವರಿಸಿದರೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಈ ಪ್ರಕರಣ ದಿನೇದಿನೆ ತೀವ್ರ ಕೂತಹಲಕ್ಕೆ ಕಾರಣವಾಗಿದ್ದು ಸೂಕ್ತ ತನಿಖೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ತಿಳಿದುಬರಲಿದೆ.

6 ಅಧಿಕಾರಿಗಳು ಸಸ್ಪೆಂಡ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಡಿಪೋ ಆರ್.ಎಫ್. ಒ. ಜಿ.ಟಿ. ರೇವಣಕರ, ಉಪವಲಯ ಅರಣ್ಯಧಿಕಾರಿಗಳಾದ ಗುರುಚಂದ್ರ ಎಂ. ಬ್ಯಾಳಿಯವರ, ಮಾರುತಿ ಸೋರಗಾಂವಿ, ಮಹೇಶ ಬೋರಕರ, ಹನಮಂತ ಬಡ್ಡಿವಡ್ಡರ, ಸುರೇಶ ವಡ್ಡರ ಅವರನ್ನು ಅಮಾನತು ಮಾಡಲಾಗಿದೆ. ಡಿಪೋ ಎಸಿಎಫ್ ಅಶೊಕ ಹಪ್ಪಳದ ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net