

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ ಶಾಸ್ತ್ರಿ(ಆಲಮಟ್ಟಿ ) ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಸೆ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಹಾಗೂ ಆಧಿಕಾರಿಗಳು ಸಿಎಂಗೆ ಸಾಥ್ ನೀಡಲಿದ್ದಾರೆ. ಶನಿವಾರ ಆಲಮಟ್ಟಿ ಜಲಾಶಯ ಸುತ್ತಮುತ್ತ ಹಬ್ಬದ ವಾತಾವರಣ ಕಂಡು ಬರಲಿದೆ. ಸಾಮಾನ್ಯವಾಗಿ ಆಗಷ್ಟನಲ್ಲೇ ಜಲಾಶಯ ಭರ್ತಿಯಾಗಿ ಸಂಪ್ರದಾಯದಂತೆ ಸಿಎಂ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮಳೆ ವಿಳಂಬವಾದ ಕಾರಣ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸುವ ಕಾರ್ಯ ವಿಳಂಬವಾಗಿದೆ. ಕೊನೆಗೂ ಸೆ. 2 ರಂದು ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆಗೆ ಕಾಲ ಕೂಡಿ ಬಂದಿದೆ.
ಸೆ.2ರಂದು ಬೆಳಗ್ಗೆ ವಿಮಾನದ ಮೂಲಕ ಬಳ್ಳಾರಿಯ ಜಿಂದಾಲ್ ಗೆ ಸಿಎಂ ಆಗಮಿಸಿ ಜಿಂದಾಲ್ ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ ಗೆ ಬರಲಿದ್ದಾರೆ. ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಜಲಾಶಯ ಆವರಣಕ್ಕೆ ಆಗಮಿಸಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಕಚೇರಿಗೆ ತೆರಳಿ ಅಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಕುರಿತ ಭೂಸ್ವಾಧೀನ, ಪುನರ್ ವಸತಿ ಪುನರ್ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ. ಕೊನೆಗೆ ರೈತರ ಅಹವಾಲು ಸ್ವೀಕರಿಸಲಿದ್ದಾರೆ. ವಿವಿಧ ರೈತ ಪರ ಸಂಘಟನೆಗಳು ಸಿಎಂಗೆ ಅಹವಾಲು ಸಲ್ಲಿಕೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದ್ದು ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ರೈತರು ಹಾಗೂ ರೈತ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಿದ್ದಾರೆ.
ಮದ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಜಿಂದಾಲ್ ಮಾರ್ಗವಾಗಿ ಬೆಂಗಳೂರಿಗೆ ಸಿಎಂ ಪ್ರವಾಸ ಬೆಳೆಸಲಿದ್ದಾರೆ.
ಇನ್ನು ಸಿಎಂ ಆಗಮನದ ಹಿನ್ನೆಲೆ ಎಸ್ಪಿ ಅವರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಓರ್ವ ಎಎಸ್ಪಿ, 4 ಡಿಎಸ್ಪಿ, 7 ಜನ ಇನ್ಸಪೆಕ್ಟರ್ 31 ಪಿಎಸ್‌ಐ, ಎಎಸೈ 20 ಹಾಗೂ 260 ಹೆಡ್ ಕಾನ್ಸಸ್ಟೇಬಲ್ ಹಾಗೂ ಕಾನ್ಸಸ್ಟೇಬಲ್ ಗಳನ್ನು ಕೆಎಸ್‌ಆರ್‌ಪಿಸಿ 2 ತುಕಡಿ, ಡಿಎಆರ್ 4 ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಯಾವುದೇ ಲೋಪವಾಗದಂತೆ ಭದ್ರತೆ ಮಾಡಲಾಗಿದೆ. ಆಲಮಟ್ಟಿ ಜಲಾಶಯದ ಆವರಣದಲ್ಲಿನ ಕೆಲ ಮಾರ್ಗಗಳ ಬದಲಾವಣೆಗಳನ್ನೂ ಮಾಡಲಾಗಿದೆ.
ನಾಳೆ ಆಲಮಟ್ಟಿ ಉದ್ಯಾನವನ, ಜಲಾಶಯ ವೀಕ್ಷಣೆ ಹಾಗೂ ವಾಸ್ತವ್ಯಕ್ಕೆ ನಿರ್ಬಂಧ ಹೇರಲಾಗಿದೆ.