

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಮೊಗೆರಡ್ಕ ಕ್ರಾಸ್ ಸಮೀಪ ಬುಧವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ದೀಕ್ಷಿತ್(19) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದೀಕ್ಷಿತ್ ವೇಣೂರಿನ ಎಸ್‌ಡಿಎಂ ಐಟಿಐಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಮೂಲತಃ ಕೇರಳದ ಕಾಸರಗೋಡು ನಿವಾಸಿ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯಿತಿಯ ಓಡೀಲ್‌ನಲ್ಲಿ ಮಾವನ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದರು. ಕಬಡ್ಡಿ ಆಟಗಾರ, ಉತ್ತಮ ಕ್ರೀಡಾಪಟು, ಕಬಡ್ಡಿ ಆಟಗಾರನಾಗಿದ್ದರು. ಕಂಬಳ ಓಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಬುಧವಾರ ದೀಕ್ಷಿತ್‌ನ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆ ವೇಣೂರಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗರ್ಡಾಡಿ ಮೊಗೆರಡ್ಕ ಕ್ರಾಸ್‌ನಲ್ಲಿ ಎದುರಿನಿಂದ ಬಂದ ಕೆಎಸ್ಸಾರ್ಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಅತಿಯಾದ ವೇಗದಲ್ಲಿ ಲಾರಿಯೊಂದನ್ನು ಓವರ್‌ಟೇಕ್ ಮಾಡುತ್ತಾ ರಸ್ತೆಯ ತೀರಾ ಬಲಭಾಗಕ್ಕೆ ಬಂದಿದ್ದು ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ದೀಕ್ಷಿತ್‌ನನ್ನು ಸ್ಥಳೀಯರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.