2024ರ ಮುನ್ನೋಟ: ಬದುಕಿಗೆ ಭದ್ರತೆ ನೀಡುವ ಹೂಡಿಕೆ

Investment
Published on

ವೈಯಕ್ತಿಕ ಮತ್ತು ಕುಟುಂಬದ ಆದಾಯ ಹೆಚ್ಚಳವಾದರೆ ಅದರ ಲಾಭ ಬರೀ ಆ ಕುಟುಂಬಕ್ಕೆ ಸೀಮಿತವಾಗದೆ, ರಾಷ್ಟ್ರದ ಆರ್ಥಿಕತೆೆಗೂ ಬೆಂಬಲವಾಗುತ್ತದೆ. ಹಾಗಾಗಿ, ಆದಾಯ ಏರಿಕೆಗೆ ಹೂಡಿಕೆಯ ಮಾರ್ಗಗಳನ್ನು ಕಂಡುಕೊಳ್ಳುವುದು ಅವಶ್ಯ. ಇತ್ತೀಚೆಗಷ್ಟೇ, ಇಡೀ ಜಗತ್ತು ಕರೊನಾ ಸಂಕಷ್ಟ ಎದುರಿಸಿತು. ಅದರಲ್ಲಿ ಆರ್ಥಿಕ ವಿಪತ್ತು ಕೂಡ ಒಂದು. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಮುಂಚಿತವಾಗಿಯೇ ಭಾರತ ಆರ್ಥಿಕತೆ ದೃಷ್ಟಿಯಲ್ಲಿ ಚೇತರಿಸಿಕೊಂಡಿದ್ದು, ಜಾಗತಿಕ ವಲಯದ ಗಮನ ಸೆಳೆಯಿತು. ಹೀಗೆ, ಶೀಘ್ರವಾಗಿ ಚೇತರಿಕೆಗೆ ಕಾರಣವಾಗಿದ್ದು ಉಳಿತಾಯ ಮತ್ತು ಹೂಡಿಕೆ ಎಂಬ ಮಹಾಅಸ್ತ್ರ! ಹಳ್ಳಿಗಳು ಕರೊನಾ ಹೊಡೆತದಿಂದ ಪಾರಾಗಿದ್ದು ಇದೇ ಉಳಿತಾಯ ಮಂತ್ರದ ಮೂಲಕ. ‘ನಾವು ಎಷ್ಟು ಗಳಿಸುತ್ತೇವೆ ಎನ್ನುವುದಕ್ಕಿಂತ, ಎಷ್ಟು ಉಳಿಸಿದ್ದೇವೆ ಎಂಬುದರ ಆಧಾರದ ಮೇಲೆ ನಮ್ಮ ಆರ್ಥಿಕ ಆರೋಗ್ಯ ನಿರ್ಧರಿಸಲ್ಪಡುತ್ತದೆ’ ಎನ್ನುತ್ತಾರೆ ತಜ್ಞರು.

100 ಅಂಕದಿಂದ 1979ರಲ್ಲಿ ಪ್ರಾರಂಭವಾದ ಬಾಂಬೆ ಸ್ಟಾಕ್ ಇಂಡೆಕ್ಸ್ (ಮುಂಬೈ ಸಂವೇದಿ ಸೂಚ್ಯಂಕ ಬಿ.ಎಸ್.ಇ) ಸೂಚ್ಯಂಕ 1990 ಜುಲೈ 25ಕ್ಕೆ 1 ಸಾವಿರಕ್ಕೆ ತಲುಪಿತು. 1 ಸಾವಿರದಿಂದ 10 ಸಾವಿರಕ್ಕೆ ಬರಲು 16 ವರ್ಷಗಳೇ ಬೇಕಾಯಿತು (2006 ಫೆಬ್ರವರಿ 6). ಆದರೆ, 10 ಸಾವಿರದಿಂದ 70 ಸಾವಿರಕ್ಕೆ ತಲುಪಿದ್ದು ಬರೀ 17 ವರ್ಷಗಳಲ್ಲಿ. ಭಾರತೀಯ ಷೇರು ಮಾರುಕಟ್ಟೆಯ ಬಂಡವಾಳ ಮೌಲ್ಯ ಒಂದೇ ವರ್ಷದಲ್ಲಿ 80.42 ಲಕ್ಷ ಕೋಟಿ ರೂ. ಹೆಚ್ಚಿದೆ. 2022ರ ಡಿಸೆಂಬರ್​ನಲ್ಲಿ 282.38 ಲಕ್ಷ ಕೋಟಿ ರೂ. ಇದ್ದ ಬಂಡವಾಳ ಮೌಲ್ಯ 2023 ಡಿಸೆಂಬರ್​ನಲ್ಲಿ 362.8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ವರ್ಷ ಷೇರು ಮಾರುಕಟ್ಟೆ ಸರಾಸರಿ ಶೇಕಡ 17.29 ರಿಟರ್ನ್ ನೀಡಿದ್ದರೆ, ಚಿನ್ನ ಶೇ.14ರಷ್ಟು ರಿಟರ್ನ್ ನೀಡಿದೆ. ಈಕ್ವಿಟಿ ಮತ್ತು ಗವರ್ನಮೆಂಟ್ ಸೆಕ್ಯೂರಿಟಿಸ್​ನಲ್ಲಿ (ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ) ಹೂಡಿಕೆ ಮಾಡಲು ಜನರು ಮುಂದಾಗುತ್ತಿದ್ದು, ಇದು ಆಯಾ ಕುಟುಂಬಕ್ಕೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ಜತೆಗೆ, ದೇಶದ ಆರ್ಥಿಕ ಬಲವನ್ನು ಕೂಡ ಹೆಚ್ಚಿಸುತ್ತದೆ ಎಂಬುದು ಗಮನಾರ್ಹ.

ಹೂಡಿಕೆಗೆ ಆಯ್ಕೆಗಳು

* ಬ್ಯಾಂಕ್ ಠೇವಣಿ

* ಷೇರು

*ಮ್ಯುಚುವಲ್ ಫಂಡ್

* ಅಂಚೆ ಕಚೇರಿ ಉಳಿತಾಯ

* ರಾಷ್ಟ್ರೀಯ ಉಳಿತಾಯ ಪತ್ರ

* ಭವಿಷ್ಯ ನಿಧಿ

* ರಿಯಲ್ ಎಸ್ಟೇಟ್

* ಚಿನ್ನ

* ಚಿನ್ನದ ಬಾಂಡ್

ಜನಸಾಮಾನ್ಯರ ಉತ್ಸಾಹ

ಮೊದಲು ಹೂಡಿಕೆಗಾಗಿ, ಕೆಲ ಸಾಂಪ್ರದಾಯಿಕ ವಿಧಾನಗಳಷ್ಟೇ ಇದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಭಾರತದ ಮಧ್ಯಮವರ್ಗದವರು ಮ್ಯೂಚುವಲ್ ಫಂಡ್​ನಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಷೇರುಗಳಲ್ಲಿ ಹೂಡಿಕೆಗೆ ಇದ್ದ ಹಿಂಜರಿತ ದೂರವಾಗುತ್ತಿದೆ. ಸೂಕ್ತ ಮಾಹಿತಿ ಮತ್ತು ಆರ್ಥಿಕ ಸಾಕ್ಷರತೆಯ ಪರಿಣಾಮ, ಷೇರು ಮತ್ತು ಎಸ್​ಐಪಿಯಲ್ಲಿ ಹೂಡಿಕೆ ಹೆಚ್ಚುತ್ತಿದೆ. ಚಿನ್ನ ಮತ್ತು ಭೂಮಿಯಲ್ಲಿ (ರಿಯಲ್ ಎಸ್ಟೇಟ್) ಹೂಡಿಕೆಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಭಾರತೀಯ ಆರ್ಥಿಕತೆ ಏರುಮುಖದತ್ತ ಸಾಗಿರುವುದು, ಜಿಡಿಪಿ ನಿರೀಕ್ಷೆಗಿಂತ ಹೆಚ್ಚು ಏರಿಕೆ ಕಂಡಿರುವುದು ಮತ್ತು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಇರುವುದು. ಹಣದುಬ್ಬರ ನಿಯಂತ್ರಣದಲ್ಲಿರುವುದು. ಹೂಡಿಕೆ ಹೆಚ್ಚಿದಷ್ಟು, ಅದು ಆರ್ಥಿಕತೆಗೆ ಶಕ್ತಿ ತುಂಬುತ್ತ ಹೋಗುತ್ತದೆ.

ಹೂಡಿಕೆ ವಿಷಯದಲ್ಲಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕಿದೆ. ಇಂದಿನ ಕಾಲದಲ್ಲಿ ಯಶಸ್ವಿ ಹೂಡಿಕೆದಾರರಾಗು ವುದು ಅಗತ್ಯ. ಸಾಂಪ್ರದಾಯಿಕ ಮಾರ್ಗಗಳನ್ನು ನೆಚ್ಚಿಕೊಳ್ಳುವುದಕ್ಕಿಂತ, ಇತರ ಆಯ್ಕೆಗಳನ್ನು ಗಮನಿಸಬೇಕು. ಷೇರು ಮಾರುಕಟ್ಟೆ ರಿಸ್ಕ್ ಎನ್ನುವವರು ಮ್ಯೂಚವಲ್ ಫಂಡ್​ನಿಂದ ಆರಂಭಿಸಬಹುದು. ಅದು ಉತ್ತಮ ರೀಟರ್ನ್ ಕೊಡುತ್ತಿದೆ. ಭಾರತದ ಆರ್ಥಿಕತೆ ಪ್ರಗತಿಪಥದ ಲ್ಲಿದ್ದು, ಜನಸಾಮಾನ್ಯರು ಹೂಡಿಕೆ ಹೆಚ್ಚಿಸಬೇಕು.

| ಬಾಲಾಜಿ ರಾವ್ ವಿತ್ತ ತಜ್ಞರು

ಬಜೆಟ್​ನಲ್ಲಿ ಅಮೃತಕಾಲದ ನೀಲಿನಕ್ಷೆ

‘ಅಮೃತ ಕಾಲ’ದ ಪರಿಕಲ್ಪನೆ ತೆರೆದಿಟ್ಟವರು ಪ್ರಧಾನಿ ನರೇಂದ್ರ ಮೋದಿ. 2021 ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುತ್ತ, ಭಾರತ ಮುಂದಿನ 25 ವರ್ಷಗಳಲ್ಲಿ ಸಾಗಬೇಕಾದ ರೋಡ್​ವ್ಯಾಪ್ ಅನಾವರಣಗೊಳಿಸಿದರು. ‘ಸ್ವಾತಂತ್ರ್ಯಪ್ರಾಪ್ತಿಯ 100 ವರ್ಷಗಳ ಸಂಭ್ರಮಕ್ಕೆ ಸಾಕ್ಷಿಯಾಗಲು 25 ವರ್ಷಗಳಿವೆ. ಈ 25 ವರ್ಷಗಳಲ್ಲಿ ಭಾರತ ಅಭಿವೃದ್ಧಿಗೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಶಕ್ತಿಶಾಲಿ ರಾಷ್ಟ್ರವಾಗಬೇಕು’ ಎಂದು ಕರೆ ನೀಡಿದರು.

* ಭಾರತೀಯರ ಜನಜೀವನವನ್ನು ಉತ್ತಮಗೊಳಿಸುವುದು ಮತ್ತು ನಗರ-ಹಳ್ಳಿಗಳ ನಡುವಿನ ಅಭಿವೃದ್ಧಿಯ ಅಂತರವನ್ನು ಕಡಿಮೆ ಮಾಡುವುದು ಅಮೃತಕಾಲ ಯೋಜನೆಯ ಪ್ರಮುಖ ಉದ್ದೇಶ.ಪ್ರತಿ ಹಳ್ಳಿಗೆ ರಸ್ತೆ, ಪ್ರತಿ ಕುಟುಂಬಕ್ಕೆ ಬ್ಯಾಂಕ್ ಖಾತೆ, ಪ್ರತಿ ಕುಟುಂಬಕ್ಕೆ ಆರೋಗ್ಯ ವಿಮೆ ಮತ್ತು ಎಲ್​ಪಿಜಿ ಗ್ಯಾಸ್ ಸೌಲಭ್ಯ ದೊರಕುವಂತೆ ಮಾಡುವುದು ಅಮೃತಕಾಲದ ಸಂಕಲ್ಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net