ಬೀದಿಗೆ ಬಂದ ಹಳಿಯಾಳ ಬಿಜೆಪಿ ಆಂತರಿಕ ಜಗಳ

31hly1- BJP
Published on

ಹಳಿಯಾಳ: ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರಕ್ಕೂ ಮುನ್ನವೇ ಹಳಿಯಾಳ ಬಿಜೆಪಿಗರ ಆಂತರಿಕ ಭಿನ್ನಮತ ಸ್ಪೋಟಗೊಳ್ಳುವ ಮೂಲಕ ಜಗಳ ಬೀದಿಗೆ ಬಂದಿದೆ.


ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಅವರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಸಭೆಗೆ ಆಗಮಿಸುತ್ತಿದ್ದರು. ಅವರನ್ನು ಬಾಗಿಲಿನಲ್ಲೇ ತಡೆದ ಬಿಜೆಪಿ ಹಳಿಯಾಳ ಘಟಕದ ಅಧ್ಯಕ್ಷ ವಿಠ್ಠಲ ಸಿದ್ದನ್ನವರ ಹಾಗೂ ಕಾರ್ಯಕರ್ತರು, ಶಿವಾಜಿ ನರಸಾನಿ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಇವರನ್ನು ಬಿಟ್ಟು ಸಭೆ ನಡೆಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷರು, ಪಕ್ಷದ ನಿಯಮದಂತೆ ಅವರನ್ನು ಬಿಟ್ಟು ಸಭೆ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಧ್ಯಕ್ಷರ ಜತೆ ಜಿಲ್ಲಾ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಸುಧಾಕರ ರೆಡ್ಡಿ, ಪ್ರಶಾಂತ ನಾಯ್ಕ ಮತ್ತು ಹಳಿಯಾಳ ಮಂಡಲ ಉಸ್ತುವಾರಿ ನಿತ್ಯಾನಂದ ಗಾಂವಕರ ಇದ್ದರು.

ಗದ್ದಲವೆಲ್ಲಾ ಗಣೇಶ ದೇವಸ್ಥಾನದ ಮುಂದೆಯೇ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಯೊಬ್ಬರು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರ ಏಜೆಂಟರಂತೆ ವರ್ತಿಸಬೇಡಿ ಎಂದು ಬಹಿರಂಗವಾಗಿ ಹೇಳಿದರು. ಇದಕ್ಕೆ ಶಿವಾಜಿ ನರಸಾನಿ ನಸು ನಕ್ಕರು. ಆಕ್ರೋಶಗೊಂಡ ಕಾರ್ಯಕರ್ತರು ಜಿಲ್ಲಾ ಕಮಿಟಿಯವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ಸಂದರ್ಭದಲ್ಲಿ ನೂಕಾಟ, ತಳ್ಳಾಟ ನಡೆದು ಗೊಂದಲದ ವಾತಾವರಣ ನಿರ್ವಣವಾಯಿತು. ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ವಿನೋದ ಎಸ್.ಕೆ. ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು.
ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿ ನರಸಾನಿ ಹಾಗೂ ಇತರ ಮೂವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದಲೇ ಬಿಜೆಪಿಗೆ ಸೋಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಅವರನ್ನು ಬಿಟ್ಟು ಸಭೆ ನಡೆಸಲು ಸಾಧ್ಯವೇ ಇಲ್ಲವೆಂದು ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದರು.


ಒಟ್ಟಾರೆ ಹಳಿಯಾಳದಲ್ಲಿ ಶನಿವಾರ ನಡೆದ ಈ ಘಟನೆ ಬಿಜೆಪಿಯಲ್ಲಿನ ಆಂತರಿಕ ಜಗಳ ಬೀದಿಗೆ ಬಂದಂತಾಗಿದ್ದು, ಜಿಲ್ಲಾ ಮತ್ತು ರಾಜ್ಯ ಕಮಿಟಿ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹಳಿಯಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ಬಿಜೆಪಿ ಪುರಸಭಾ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net