ಭಾವೈಕ್ಯತೆಯೊಂದಿಗೆ ಸಹೋದರತ್ವ ಬೆಸೆಯಲಿರುವ ಸರ್ವಧರ್ಮ ಸಮ್ಮೇಳನ

ಪಾಲಿಬೆಟ್ಟದಲ್ಲಿರುವ ದರ್ಗಾ ಆವರಣದಲ್ಲಿ ಆಯೋಜಿಸಿದ್ದ ಸರ್ವ ಧರ್ಮ ಸಮ್ಮೇಳನದಲ್ಲಿ  ಮಹಾಂತ ಶಿವಲಿಂಗ ಸ್ವಾಮೀಜಿ
ಮಾತನಾಡಿದರು.
ಪಾಲಿಬೆಟ್ಟದಲ್ಲಿರುವ ದರ್ಗಾ ಆವರಣದಲ್ಲಿ ಆಯೋಜಿಸಿದ್ದ ಸರ್ವ ಧರ್ಮ ಸಮ್ಮೇಳನದಲ್ಲಿ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿದರು.
Published on

ಸಿದ್ದಾಪುರ: ಸರ್ವಧರ್ಮ ಸಮನ್ವಯ ಕೇಂದ್ರಗಳಿಂದ ಶಾಂತಿ, ಸಹಬಾಳ್ವೆ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.

ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟದ ಆರ್ಕಾಡ್ ಪಟ್ಟಣ ಬಾಬಾ ಶಾಹ್‌ವಲಿ ಅವರ ದರ್ಗಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ವ ಧರ್ಮ ಸಮ್ಮೇಳನದ ಉರುಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂತಹ ಸರ್ವಧರ್ಮ ಸಮ್ಮೇಳನಗಳು ಭಾವೈಕ್ಯತೆ ಮೂಡಿಸುವುದರ ಜತೆಗೆ ಸಹೋದರತ್ವ ಬೆಸೆಯಲಿದೆ ಎಂದರು.

ಪಾಲಿಬೆಟ್ಟ ಉರುಸ್ ಸರ್ವ ಧರ್ಮಿಯರನ್ನು ಒಗ್ಗೂಡಿಸುವ ಮೂಲಕ ಸೌಹಾರ್ದತೆ ಸಾರುತ್ತಿದೆ. ಇದಕ್ಕೆ ಉರುಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತ ಸಮೂಹವೇ ಸಾಕ್ಷಿ. ನಾವು ನಡೆಯುವ ದಾರಿಗಳು ಬೇರೆ ಇರಬಹುದು. ಆದರೆ ತಲುಪುವ ಗುರಿ ಮಾತ್ರ ಭಗವಂತನ ಸನ್ನಿಧಿಗೆ. ಕೆಡುಕಿನಿಂದ ದೂರವಾಗಿ ಒಳಿತನ್ನು ಬಯಸುವ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಪಾಲಿಬೆಟ್ಟ ಲೂರ್ಡ್ಸ್ ಚರ್ಚ್‌ನ ರೆ.ಫಾ. ಮರಿಯಾ ರಾಜ್ ಜಾರ್ಜ್ ಮಾತನಾಡಿ, ದೇವರು ಮಾನವನ ರೂಪದಲ್ಲಿ ಬದುಕಲು ಅವಕಾಶ ಕಲ್ಪಿಸಿದೆ. ನಾವೆಲ್ಲರೂ ಶಾಂತಿಯಿಂದ ನೆಮ್ಮದಿಯ ಜೀವನ ನಡೆಸಬೇಕಿದೆ. ಎಲ್ಲ ಧರ್ಮಗಳ ಬೋಧನೆಯನ್ನು ಅನುಸರಿಸಿದರೆ ನಾವು ಯಾರನ್ನೂ ದ್ವೇಷಿಸುವುದಿಲ್ಲ ಎಂದರು.

ಜಿಲ್ಲಾ ವಕ್ಫ್ ಬೋರ್ಡ್ ಮಂಡಳಿ ಉಪಾಧ್ಯಕ್ಷ ಶಾಪಿ ಸಹದಿ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭಾವೈಕ್ಯತೆಯಿಂದ ಬಾಳಿದಲ್ಲಿ ಯಾವುದೇ ಕಾರಣಕ್ಕೂ ನಮ್ಮನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಮಂದಿರ, ಮಸೀದಿಗಳನ್ನು ಬಳಸಿಕೊಂಡು ಕೋಮು ಭಾವನೆಗಳೊಂದಿಗೆ ಅಶಾಂತಿ ಸೃಷ್ಟಿಸಲು ಮುಂದಾಗುತ್ತಿರುವುದು ವಿಷಾದನೀಯ. ಈ ಜಗತ್ತಿನಲ್ಲಿ ಸರ್ವಧರ್ಮೀಯರು ಒಂದಾಗಿ ಜೀವನ ನಡೆಸುತ್ತಿರುವ ದೇಶ ಭಾರತ. ಸ್ವಾತಂತ್ರೃ ಸಂಗ್ರಾಮದಲ್ಲಿ ಎಲ್ಲ ಧರ್ಮಿಯರು ಒಗ್ಗೂಡಿ ಭವಿಷ್ಯದ ದೇಶವನ್ನು ಕಟ್ಟಿದ್ದಾರೆ. ಇದರ ಪರಿಣಾಮ ಸೂಫಿ ಸಂತರು, ಶರಣರು ಒಟ್ಟಾಗಿ ಜೀವನ ಮಾಡುತ್ತಿದ್ದರು. ಹಾಗಾಗಿ ಎಲ್ಲ ಆಚರಣೆಗಳು ಸೌಹಾರ್ದತವಾಗಿಯೇ ನಡೆಯುತ್ತಿತ್ತು. ಆದರೆ ಪ್ರಸ್ತುತ ಒಂದು ವರ್ಗವನ್ನು ದ್ವೇಷಿಸುವ ಮೂಲಕ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.

ಜುಮಾ ಮಸೀದಿ ಅಧ್ಯಕ್ಷ ಪಿ.ಕೆ.ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೊಡಗು ಜಿಲ್ಲಾ ಖಾಝಿ ಎಂ. ಎಂ.ಅಬ್ದುಲ್ಲ ಫೈಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಪಾಲಿಬೆಟ್ಟ ವಿಎಸ್‌ಎಸ್‌ಎನ್ ಅಧ್ಯಕ್ಷ ಅಜಿತ್ ಕರುಂಬಯ್ಯ, ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಪಿ.ಎಂ.ಹಕೀಂ, ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ. ಎಂ ಅಬ್ದುಲ್ ಲತೀಫ್, ಗ್ರಾಮ ಪಂಚಾಯತಿ ಸದಸ್ಯರಾದ ಅಬ್ದುಲ್ ನಾಸರ್, ವೆಂಕಟೇಶ್, ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಸೈನುದ್ದೀನ್, ಕಾರ್ಯದರ್ಶಿ ಸಮೀರ್ ಮುನ್ನ, ಸಹ ಕಾರ್ಯದರ್ಶಿ ಫಜಲ್ ರೆಹಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net