ಅಂತರ್ಜಾತಿ ವಿವಾಹವಾಗಿದ್ದ ದಂಪತಿಗೆ ಬಹಿಷ್ಕಾರ

Rehana Pasha tahasildar Challakere
Published on

ನಾಯಕನಹಟ್ಟಿ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮೂಕ ದಂಪತಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಸಮೀಪದ ಎನ್.ದೇವರಹಳ್ಳಿಯಲ್ಲಿ ನಡೆದಿದೆ.

ಪ್ರೀತಿಸಿ ಮದುವೆಯಾಗಿರುವ ಗ್ರಾಮದ ಸಾವಿತ್ರಮ್ಮ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಣಿಕಂಠ ಬಹಿಷ್ಕಾರಕ್ಕೊಳಗಾದವರು. ಇಬ್ಬರೂ ಹುಟ್ಟಿನಿಂದಲೇ ಶ್ರವಣ ಮತ್ತು ವಾಕ್‌ದೋಷ ಹೊಂದಿದ್ದಾರೆ.

ಎನ್.ದೇವರಹಳ್ಳಿ ಗ್ರಾಮದ ಜೋಗಿ ಸಮುದಾಯದ ಸಾವಿತ್ರಮ್ಮ, ರೆಡ್ಡಿ ಜಾತಿಯ ಮಣಿಕಂಠ ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸಿ 2021ರ ಏಪ್ರಿಲ್ 7ರಂದು ಮದುವೆಯಾಗಿದ್ದರು.

ಮದುವೆ ಬಳಿಕ ಸಾವಿತ್ರಮ್ಮ ಗಂಡನನ್ನು ತವರಿಗೆ ಕರೆತಂದಿದ್ದಳು. ಆಗಲೂ ಜೋಗಿ ಸಮುದಾಯದ ಮುಖಂಡರು ಅನ್ಯ ಜಾತಿಯ ಯುವಕನನ್ನು ಮದುವೆಯಾಗಿರುವುದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದುದು ಎಂದು ಆಕ್ಷೇಪಿಸಿ ಯುವತಿಯ ಕುಟುಂಬದಿಂದ 30 ಸಾವಿರ ರೂ. ದಂಡ ಕಟ್ಟಿಸಿಕೊಂಡು ಸಾವಿತ್ರಮ್ಮ ಮತ್ತು ಪತಿಗೆ ಗ್ರಾಮದಿಂದ ಹೊರಹೋಗುವಂತೆ ಸೂಚಿಸಿದ್ದರು. ದಂಪತಿ ಬೆಂಗಳೂರಿಗೆ ಹಿಂತಿರುಗಿದ್ದರು.

ಈಚೆಗೆ ಹೆರಿಗೆಗೆಂದು ಸಾವಿತ್ರಮ್ಮ ತವರಿಗೆ ಬಂದ ವಿಷಯ ತಿಳಿದ ಗ್ರಾಮದ ಮುಖಂಡರು ಮತ್ತೊಮ್ಮೆ ಪಾಲಕರನ್ನು ಕರೆಸಿ ಸಭೆ ನಡೆಸಿದ್ದರು. ಮಗಳು, ಅಳಿಯನನ್ನು ಗ್ರಾಮದಿಂದ ಆಚೆ ಕಳುಹಿಸದಿದ್ದರೆ ನಿಮ್ಮನ್ನೂ ಗ್ರಾಮದಿಂದ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಈ ವಿಷಯ ತಿಳಿದ ದಂಪತಿ ಒಂದು ತಿಂಗಳ ಹಸುಗೂಸು ಜತೆ ಚಳ್ಳಕೆರೆಯ ಮೂಗ ಮತ್ತು ಕಿವುಡರ ಶಾಲೆಗೆ ತೆರಳಿ ಘಟನೆ ಕುರಿತು ಮಾಹಿತಿ ನೀಡಿದ್ದರು.

ಅಲ್ಲಿನ ಶಿಕ್ಷಕರು ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತಂದಿದ್ದು, ಮೇಲ್ವಿಚಾರಕರಾದ ಎನ್.ನಿರ್ಮಲಾ, ಟಿ.ಮಂಜುಳಾ, ಬೋರಯ್ಯ ಅವರು ದೂರು ಸ್ವೀಕರಿಸಿ ತಹಸೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಸ್ಪಂದಿಸದಿದ್ದರೆ ಕಾನೂನು ಕ್ರಮ: ಸಾಂತ್ವಾನ ಕೇಂದ್ರಕ್ಕೆ ಭೇಟಿ ನೀಡಿ ದಂಪತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಚಿತ್ರದುರ್ಗದ ಸ್ವಾಧಾರ ಕೇಂದ್ರದಲ್ಲಿ ಮಹಿಳೆ ಮತ್ತು ಮಗುಗೆ ತಾತ್ಕಾಲಿಕವಾಗಿ ಆಶ್ರಯ ಒದಗಿಸಲಾಗಿದೆ ಎಂದು ಚಳ್ಳಕೆರೆ ತಹಸೀಲ್ದಾರ್ ರೆಹಾನ್ ಪಾಷಾ ತಿಳಿಸಿದ್ದಾರೆ. ಅಲೆಮಾರಿಗಳಾಗಿರುವ ಜೋಗಿ ಸಮುದಾಯದಲ್ಲಿ ಮೂಢ ನಂಬಿಕೆಗಳು ಆಚರಣೆಯಲ್ಲಿವೆ. ಜತೆಗೆ ಶೈಕ್ಷಣಿಕ ಕೊರತೆ. ಈ ಕಾರಣಕ್ಕೆ ಇಂತಹ ಪ್ರಕರಣ ನಡೆದಿದೆ. ಆದ್ದರಿಂದ ಸಮಸ್ಯೆ ಪರಿಹಾರಕ್ಕೆ ಮೊದಲು ಆದ್ಯತೆ ನೀಡಲಾಗುವುದು. ಸಂಬಂಧಿಸಿದ ಇತರ ಇಲಾಖೆ ಅಧಿಕಾರಿಗಳ ಜತೆಗೆ ಶನಿವಾರ ಎನ್.ದೇವರಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು. ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ರೆಹಾನ್ ಪಾಷಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net