

\ಚಿತ್ರದುರ್ಗ: ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ರಘುಆಚಾರ್ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಜಿ.ಎನ್.ಮಹೇಶ್ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸಮುದಾಯದಕ್ಕೆ ಚ್ಯುತಿಯಾಗುವ ರೀತಿ ಯಾರೂ ಮಾತನಾಡಬಾರದು. ಆದರೆ, ರಘುಆಚಾರ್ ಹೇಳಿಕೆಯಿಂದ ಸಮಾಜಕ್ಕೆ ಆಘಾತ ಉಂಟಾಗಿದೆ. ಇದರಿಂದ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ಕೂಡಲೇ ಅವರನ್ನು ಉಚ್ಚಾಟಿಸಬೇಕು ಎಂದು ಕೆಪಿಸಿಸಿ, ಎಐಸಿಸಿ ನಾಯಕರಿಗೆ ಒತ್ತಾಯಿಸಿದರು.
ಬೇರೆ ಜಿಲ್ಲೆಯಿಂದ ಬಂದವರನ್ನು ಆತ್ಮೀಯವಾಗಿ ಕಾಣುವ ಉತ್ತಮ ಸಂಸ್ಕಾರವನ್ನು ದುರ್ಗದ ಜನ ಹೊಂದಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ಎರಡು ಬಾರಿಯೂ ಬೆಂಬಲಿಸಿ ಅವರ ಗೆಲುವಿಗೆ ಎಲ್ಲ ಸಮುದಾಯದವರು ಕಾರಣರಾಗಿದ್ದಾರೆ. ಆದರೂ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸಮುದಾಯದ 4 ಲಕ್ಷ ಮತದಾರರಿದ್ದು, ಈ ಹಿಂದೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ಸಂಕಷ್ಟಕ್ಕೆ ಸಿಲುಕಿ ದ್ದರು. ಈಗ ಮತ್ತೊಮ್ಮೆ ಸಮಾಜಕ್ಕೆ ನೋವುಂಟು ಮಾಡಿದ್ದಾರೆ. ರಘುಆಚಾರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಮುಂದಾಗುವ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ಅವರ ಉಡಾಫೆ ಮಾತಿನಿಂದ ಸಮಾಜಕ್ಕೆ ಧಕ್ಕೆಯಾಗಿದ್ದು, ಖಂಡನೀಯ. ನಮಗೆ ವ್ಯಕ್ತಿ ಎಂದಿಗೂ ಮುಖ್ಯವಲ್ಲ, ಸಮುದಾಯದ ಘನತೆ ದೊಡ್ಡದಾಗಿದೆ. ಬೇಷರತ್ ಕ್ಷಮೆಯಾಚಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಎಸ್‌ಎಂಎಲ್ ತಿಪ್ಪೇಸ್ವಾಮಿ, ಕಾರ್ತಿಕ್, ಬಸವರಾಜಯ್ಯ, ರಾಜ್ ಇತರರಿದ್ದರು.
ಯಾವ ಸಮಾಜವನ್ನೂ ಅವಮಾನಿಸಿಲ್ಲ
ಚಿತ್ರದುರ್ಗ: ರಘುಆಚಾರ್ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಲಿಂಗಾಯತ ಸೇರಿ ಯಾವ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಎನ್‌ಎಸ್‌ಯುಐ ಕಾರ್ಯದರ್ಶಿ ಮಮತಾ ನೇರ್ಲಿಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅವರದೇ ಧ್ವನಿಯಲ್ಲಿ ಡಬ್ಬಿಂಗ್ ಆರ್ಟಿಸ್ಟ್‌ಗಳು ಮಾತನಾಡಿದ್ದಾರೆ. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದ್ದು, ಅದನ್ನು ಸಹಿಸದ ಕೆಲವರು ತೇಜೋವಧೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.