ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬೈಕ್‌ಗೆ ಹಗ್ಗಕಟ್ಟಿ ಎಳೆದು ವಿನೂತನ ಪ್ರತಿಭಟನೆ

BJP PROTEST PETROL RATE AGAINEST
ವಿಜಯಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಕಾಸುಗೌಡ ಬಿರಾದಾರ, ಸುರೇಶ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯ ಸರ್ಕಾರದ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೈಕ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೈಕ್‌ಗೆ ಹಗ್ಗಕಟ್ಟಿ ಎಳೆದು ಗಮನ ಸೆಳೆದರು.

ಒಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದ ಖಜಾನೆ ಬರಿದಾಗಿದ್ದು, ಅದನ್ನು ಭರ್ತಿ ಮಾಡಲು ಜನರನ್ನು ಸುಲಿಗೆ ಮಾಡುತ್ತಿದೆ. ಜನ ಕಲ್ಯಾಣ ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆಗೊಳಿಸಬೇಕು ಎಂದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಿಲ್ಲದಿದ್ದರೆ, ಈ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ. ಅಗತ್ಯ ವಸ್ತುಗಳ ಬೆ ಏರಿಸುವ ಮೂಲಕ ನಾವು ಸರ್ಕಾರ ನಡೆಸುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್ಸಿಗರು ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ಭಾರತೀಯ ಜನತಾ ಪಾರ್ಟಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ, ನಿಮ್ಮ ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ ಹಾಗೂ ಮಧ್ಯಮ ವರ್ಗಗಳ ವಿರೋಧಿ ಆಡಳಿತ ಕೊನೆಯಾಗುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಮುಖಂಡ ವಿಜಯಕುಮಾರ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ. ಡಿಸೇಲ್ ದರ ಏರಿಕೆಯ ಹಿನ್ನೆಲೆಯಲ್ಲಿ ಕೇವಲ ವಾಹನ ಸವಾರರಿಗೆ ಮಾತ್ರ ಹೊರೆಯಾಗುವುದಿಲ್ಲ, ಇದು ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀರಲಿದೆ, ಪ್ರಯಾಣದ ದರವನ್ನು ಹೆಚ್ಚಿಸಲಿದೆ, ತನ್ಮೂಲಕ ತರಕಾರಿಗಳ ಬೆಲೆ, ದಿನನಿತ್ಯ ಗೃಹಬಳಕೆ ವಸ್ತುಗಳ ಬೆಲೆ, ದವಸ ಧಾನ್ಯಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಾಗಲಿದೆ. ಇದು ಇಡೀ ಕರುನಾಡ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಸರ್ವಾಧಿಕಾರಿ ನಿರ್ಧಾರವಾಗಿದೆ ಎಂದು ದೂರಿದರು.

ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಪೆಟ್ರೋಲ್ ಬೆಲೆ ಲೀಟರ್ ಗೆ 3 ರೂ. ಹಾಗೂ ಡಿಸೇಲ್ ಬೆಲೆ 3.5 ರೂ. ಹೆಚ್ಚಳ ಮಾಡಿರುವುದು ಅವಿವೇಕದ ನಿರ್ಧಾರ. ಈ ನಿರ್ಧಾರ ಹಿಂಪಡೆಯುವವರೆಗೂ ಬಿಜೆಪಿಯ ಹೋರಾಟ ನಿರಂತರವಾಗಿರುತ್ತದೆ ಎಂದರು.
ನಗರದ ಮಂಡಲ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿ, 18 ರಿಂದ 19 ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದರು, ಅವರು ಈಗ ಹತಾಶರಾಗಿದ್ದಾರೆ. ಹತಾಶರಾಗಿ ಬೆಲೆ ಏರಿಕೆಗೆ ಮುಂದಾಗಿದ್ದಾರೆ ಎಂದರು.

ಮುಖಂಡರಾದ ಮಂಜುನಾಥ ಮೀಸೆ, ಕಾಸುಗೌಡ ಬಿರಾದಾರ, ಗುರಲಿಂಗಪ್ಪ ಅಂಗಡಿ, ಸ್ವಪ್ನಾ ಕಣಮುಚನಾಳ ಮಾತನಾಡಿದರು.
ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವುರ, ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ಸುರೇಶ ಬಿರಾದಾರ, ಚಿದಾನಂದ ಚಲವಾದಿ, ಶ್ರೀನಿವಾಸ ಕಂದಗಲ, ಮಹೇಂದ್ರ ನಾಯಕ, ಮಲ್ಲಿಕಾರ್ಜುನ ಕಿವಡೆ, ವಿಜಯ ಜೋಶಿ, ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜು ಗಡಗಿ, ಮಹೇಶ ಒಡೆಯರ ಪ್ರವೀಣ ವಂದಾಲಮಠ, ಸಂತೋಷ ಭೋವಿ, ಸಂತೋಷ ಕುರದಡ್ಡಿ, ವಿನೋದ ಪತ್ತಾರ, ಸಂಗಮೇಶ ಉಕ್ಕಲಿ, ಅನೀಲ ಉಪ್ಪಾರ, ಸಂತೋಷ ನಿಂಬರಗಿ, ಸುಚೀತಾ ಜಾಧವ, ಮಧು ಪಾಟೀಲ, ಸುವರ್ಣ ಕುರ್ಲೆ, ಈರಣ್ಣ ಶಿರಮಗೊಂಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net