

ಮಡಿಕೇರಿ:
ಸೋಮವಾರ (ಜ.೨೨) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮಭಕ್ತರ ಸರ್ಕಾರ ಎಲ್ಲಾ ಕಡೆ ರಜೆ ನೀಡಿದೆ. ಆದರೆ ಹೆಸರಿನಲ್ಲಿ ರಾಮ ಇಟ್ಟುಕೊಂಡು ರಾಮನ ಬಗ್ಗೆ ಶ್ರದ್ದೆ ಇಲ್ಲದವರು ರಜೆ ಕೊಟ್ಟಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಟಾಂಗ್ ನೀಡಿದರು. ಭಾನುವಾರ ಮಡಿಕೇರಿಯಲ್ಲಿ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು.
ಇಡೀ ದೇಶದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಜನತೆ ಭಕ್ತಿಭಾವದಿಂದ ಆ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ ಆಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅತೀವ ಸಂತಸ ತಂದಿದೆ. ದೇಶದಾದ್ಯಂತ ಹಬ್ಬದ ವಾತವರಣ ಸೃಷ್ಟಿಯಾಗಿದೆ. ಆದರೆ ಬ್ಯಾನರ್ ಹಾಕುವ ವಿಚಾರದಲ್ಲೂ ಕೆಲವೆಡೆ ಸಮಸ್ಯೆಯಾಗಿದೆ. ಎಲ್ಲಾ ಕಡೆ ಬ್ಯಾನರ್ ಹಾಕಲು ಅವಕಾಶ ಕೊಡಬೇಕು ಎದು ಪೊಲೀಸರಿಗೂ ಹೇಳಿದ್ದೇನೆ. ಇದೊಂದು ರಾಷ್ಟ್ರೀಯ ಹಬ್ಬ. ಎಲ್ಲರೂ ಉತ್ಸುಕತೆಯಿಂದ ಭಾಗಿಯಾಗುತ್ತಿದ್ದಾರೆ. ರಾಮನ ಮೂರ್ತಿ ಕೆತ್ತಲು ಕಲ್ಲು ತೆಗೆದ ಜಾಗದಲ್ಲೂ ವಿಶೇಷ ಪೂಜೆ ನಡೆಸಲಾಗುವುದು. ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಜಿ.ಟಿ. ದೇವೆಗೌಡ ತಿರ್ಮಾನ ಮಾಡಿದ್ದಾರೆ ಎಂದರು.
ರಾಷ್ಟ್ರೀಯ ಹೆದ್ದಾರಿ ೨೭೫ರ ಮೈಸೂರಿನಿಂದ ಕುಶಾಲನಗರ ತನಕದ ಹೆದ್ದಾರಿ ಕಾಮಗಾರಿಗೆ ಈ ತಿಂಗಳ ೨೯ಕ್ಕೆ ಪರಿಸರ ಇಲಾಖೆ ಒಪ್ಪಿಗೆ ಸಿಗಲಿದೆ. ಮುಂದಿನ ತಿಂಗಳು ಕಾಮಗಾರಿ ಆರಂಭವಾಗಲಿದ್ದು, ೧೫ ತಿಂಗಳಲ್ಲಿ ಕೆಲಸ ಮುಗಿಸಿ ಜನಬಳಕೆಗೆ ಹೆದ್ದಾರಿ ಲಭ್ಯವಾಗಲಿದೆ. ಮಡಿಕೇರಿಯಿಂದ ಸಂಪಾಜೆ ತನಕದ ರಸ್ತೆ ಉನ್ನತೀಕರಿಸಲಾಗುವುದು. ಸಂಪಾಜೆಯಿಂದ ಮಾಣಿ ತನಕ ನಾಲ್ಕು ಪಥದ ರಸ್ತೆ ನಿರ್ಮಾಣ ಆಗಲಿದೆ ಎಂದು ಮಾಹಿತಿ ನೀಡಿದರು.