

ಭಟ್ಕಳ: ಭಾರತ ಯಾರಿಗೂ ಕೆಟ್ಟದನ್ನು ಬಯಸದ ದೇಶ. ಎಲ್ಲರನ್ನು ಸಂತೈಸುವ ಏಕೈಕ ಧರ್ಮವೆಂದರೆ ಅದು ಹಿಂದು ಧರ್ಮ. ಜಗತ್ತಿಗೆ ಭಾರತ ಭಯೋತ್ಪಾದಕರನ್ನು ಕೊಟ್ಟಿಲ್ಲ. ಜಗತ್ತಿನಲ್ಲಿ ಒಳ್ಳೆಯದು ಅಂತಾ ಇರುವುದು ಭಾರತದಲ್ಲಿ ಮಾತ್ರ ಎಂದು ಬಳ್ಳಾರಿ ಜಿಲ್ಲೆಯ ಉತ್ತರ ಪ್ರಾಂತ ಸಂಚಾಲಕ ಗೋಪಾಲ ಬಳ್ಳಾರಿ ಹೇಳಿದರು.
ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪಥಸಂಚಲನದಲ್ಲಿ ವಕ್ತಾರರಾಗಿ ಅವರು ಮಾತನಾಡಿದರು. ಭಾರತ ಜಗತ್ತಿನ ಹೃದಯ. ನಮ್ಮ ಹೃದಯದಂತೆ ಅದು ಪ್ರತಿದಿನ ಪರಿಶುದ್ಧ ರಕ್ತವನ್ನು ದೇಹದಲ್ಲೆಡೆ ಕಳುಹಿಸುವಂತೆ ಜಗತ್ತಿಗಾಗಿ ಭಾರತ ಆ ಕೆಲಸ ಮಾಡುತ್ತಿದೆ. ನಮ್ಮ ತಾಳ್ಮೆಯ ಫಲವಾಗಿ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನೋಡುತ್ತಿದ್ದೇವೆ. ನ್ಯಾಯಯುತವಾದ ಹೋರಾಟ ಮಾಡಿ ಕಾಶಿಯನ್ನು ಪಡೆಯತ್ತೇವೆ. 1000 ವರ್ಷ ಹೋದರೂ ನ್ಯಾಯದ ಹಾದಿ ಬಿಡುವುದಿಲ್ಲ.
ಸಂಘ ಯಾರ ವಿರೋಧಿಯಲ್ಲ: ಈ ಪಥ ಸಂಚಲನ ಯಾರಿಗೂ ನಮ್ಮಶಕ್ತಿ ಪ್ರದರ್ಶನ ಮಾಡುವುದಕ್ಕಲ್ಲ. ನಮ್ಮ ದೃಷ್ಟಿ ಧ್ಯೇಯದ ಕಡೆ. ಧ್ಯೇಯ ದೇಶದ ಕಡೆ. ದೇಶ ಎಂದರೆ ನಾವು ಮಾತ್ರವಲ್ಲ. ಇಲ್ಲಿ ಎಲ್ಲರೂ ಇದ್ದಾರೆ. ಒಂದು ತೋಟದಲ್ಲಿ ಒಂದು ಬಗೆಯ ಹೂವು ಇದ್ದರೆ ಅದು ಸುಂದರವಾಗುವುಲ್ಲ. ಎಲ್ಲಾ ಜಾತಿ, ಎಲ್ಲಾ ಬಣ್ಣದ ಹೂವುಗಳಿದ್ದರೆ ಮಾತ್ರ ಅದಕ್ಕೊಂದು ಸೊಬಗು. ಇಲ್ಲಿ ನಮ್ಮ ಧ್ಯೇಯ, ಉದ್ದೇಶವೂ ಅದೆ. ಪಥ ಸಂಚಲನ ನಮ್ಮ ಉತ್ಸಾಹಕ್ಕೆ. ಹಿಂದು ಸಮಾಜ ಜಾತಿಗಳಲ್ಲಿ ಹಂಚಿ ಹೋಗಿದೆ. ಅದನ್ನು ಉದ್ದೇಶಪೂರ್ವಕಾಗಿ ಬ್ರಿಟಿಷರು ಹುಟ್ಟಿ ಹಾಕಿದ್ದು. ಇಂದು ಯುವಕರು ಮಾದಕವ್ಯಸನಕ್ಕೆ ಬಲಿಯಾಗುತ್ತಿದ್ದು ಅವರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಜನರು ಬಿಡುತ್ತಿಲ್ಲ, ಅಡ್ಡಿ ಮಾಡುತ್ತಿದ್ದಾರೆ. ಕೊಪ್ಪಳದಲ್ಲಿ ಇತ್ತೀಚೆಗೆ ಸಂಘದ ಪ್ರಾಥಮಿಕ ಶಾಖೆ ನಡೆಸಲು ಅಡ್ಡಿಪಡಿಸಿದ್ದರು. ನಾವೇನೂ ಇಲ್ಲಿ ಬಂದೂಕಿನ ತರಬೇತಿ ನೀಡುತ್ತಿಲ್ಲ. ಸಂಸ್ಕಾರ-ಸಂಸ್ಕೃತಿ ಅರಿವೂ ಮೂಡಿಸಿ ದೇಶ ಭಕ್ತಿ ಪಸರಿಸುತ್ತಿದ್ದೇವೆ ಎಂದರು.
ಭಾಸ್ಕರ ಆಚಾರ್ಯ, ಮಾಜಿ ಸಚಿವ ಶಿವಾನಂದ ನಾಯ್ಕ, ಸಂಘದ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯ ಗಣವೇಷಧಾರಿಗಳು ಇದ್ದರು.