ವಿದ್ಯಾವಂತರಲ್ಲಿ ದ್ವೇಷ, ಅಸೂಯೆ ಹೆಚ್ಚಳ

2 tth 03
ತ್ಯಾರಂದೂರಿನಲ್ಲಿ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಆರಗ ಜ್ಞಾನೇಂದ್ರ ಮಾತನಾಡಿದರು. ಸುಬ್ರಹ್ಮಣ್ಯ, ರಾಘವೇಂದ್ರ ಪವಾರ್, ರವೀಶ್, ಶ್ಯಾಮಪ್ಪ ಇತರರಿದ್ದರು.
Published on

ತೀರ್ಥಹಳ್ಳಿ: ಸಮಾಜದಲ್ಲಿ ಬೇರೆಯವರ ಕುರಿತಂತೆ ದ್ವೇಷ, ಮತ್ಸರಗಳು ವಿದ್ಯಾವಂತರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ತ್ಯಾರಂದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಗುಡ್ಡೆಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿದ ಅವರು, ಕೇವಲ ಪಠ್ಯಕ್ರಮದಲ್ಲಿ ಸಿಗುವ ಮಾರ್ಗದರ್ಶನಕ್ಕಿಂತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಗುವಿನ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಹೇಳಿದರು.
ಈಗಿನ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ಗುಣಮಟ್ಟದ ಸಂಸ್ಕಾರದ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ಇದೆ. ವಿದ್ಯಾವಂತರಲ್ಲಿ ದ್ವೇಷ, ಅಸೂಯೆ ಸೇರಿದಂತೆ ರಾಕ್ಷಸಿ ಗುಣಗಳು ಉದ್ದೀಪನಗೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಇಂದಿನ ಮಕ್ಕಳಿಗೆ ಹೃದಯಕ್ಕೆ ಸಂಸ್ಕಾರ ಸಿಗುವಂತಹ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ ಎಂದರು.
ತರಗತಿ ಕೊಠಡಿಗಳಲ್ಲಿ ಸಿಗುವ ಶಿಕ್ಷಣಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಅಂಶಗಳಿರುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರು ಕೂಡ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ, ಗುಡ್ಡೇಕಪ್ಪ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಪವಾರ್, ಸದಸ್ಯರಾದ ರವೀಶ್, ಶ್ಯಾಮಪ್ಪ, ಮುರುಗೇಂದ್ರ, ಬಿಇಒ ವೈ.ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net